ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪುನರುಜ್ಜೀವನದ ಕೇಂದ್ರ
ವಿಶ್ವ ಶ್ರೇಷ್ಠವಾದ ಭಾರತೀಯ ಸಂಸ್ಕೃತಿಯಲ್ಲಿ ಕುರುಬರ ಸಂಸ್ಕೃತಿಯು ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠವಾದುದ್ದು. ಈ ಕುರುಬರ ಸಂಸ್ಕೃತಿಯ ಹುಟ್ಟು, ಬೆಳವಣಿಗೆ, ಪಾಲನೆ, ಪೋಷಣೆಯಲ್ಲಿ ಸಮುದಾಯದ ಅನೇಕ ಮಹಾನ್ ಇತಿಹಾಸ ಪುರುಷ ಅನರ್ಘ್ಯ ರತ್ನಗಳ ಕೊಡುಗೆ ಅನನ್ಯವಾದುದು ಹಾಗೂ ಚಿರಸ್ಮರಣೀಯವಾದದ್ದು.
ಅಖಂಡ ಕರ್ನಾಟಕದಲ್ಲಿ ಕುರುಬ ಸಮಾಜದ ಜಾಗೃತಿ ಮತ್ತು ಅಭಿವೃದ್ಧಿಗಾಗಿ ಸಮುದಾಯದ ಹಿರಿಯರೆಲ್ಲರೂ ಕೂಡಿ 1992ರಲ್ಲಿ ಕುರುಬರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶಕ್ತಿಯಾದ ಮಹಾನ್ ಮಾನವತಾವಾದಿ ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರ ಕರ್ಮಭೂಮಿಯಾದ ಶ್ರೀ ಕ್ಷೇತ್ರ ಕಾಗಿನೆಲೆಯಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಸ್ಥಾಪಿಸಿ ಪ್ರಥಮ ಜಗದ್ಗುರುಗಳಾಗಿ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮೀಜಿಯವರನ್ನು ಪೀಠಾಧ್ಯಕ್ಷರನ್ನಾಗಿ ಮಾಡಿ ಸಮುದಾಯದ ಸಂಘಟನೆ, ಜಾಗೃತಿ, ಮಾರ್ಗದರ್ಶನದ ಜವಾಬ್ದಾರಿಯನ್ನು ನೀಡಲಾಯಿತು.
ಪ್ರಥಮ ಜಗದ್ಗುರುಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವಾ ಕಾರ್ಯಗಳನ್ನು ಕೈಗೊಂಡು ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ, ದಿನಾಂಕ ೬-೭-೨೦೦೬ ರಂದು ಅಪಾರ ಭಕ್ತ ಸಮೂಹವನ್ನು ಅಗಲಿ ಬ್ರಹ್ಮಲೀನರಾದರು.
ಪ್ರಥಮ ಜಗದ್ಗುರುಗಳ ಮತ್ತು ಶ್ರೀ ಮಠದ ಧರ್ಮದರ್ಶಿಗಳ ಆಶಯದಂತೆ ದಿನಾಂಕ ೨೯-೧೦-೨೦೦೬ ರಂದು ಶ್ರೀ ಕ್ಷೇತ್ರ ಕಾಗಿನೆಲೆಯಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಎರಡನೇ ಜಗದ್ಗುರುಗಳಾಗಿ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರನ್ನು ಪೀಠಾಧ್ಯಕ್ಷರನ್ನಾಗಿ ಮಾಡಿ ಶ್ರೀ ಮಠದ ಸಂಪೂರ್ಣ ಜವಾಬ್ದಾರಿ ನೀಡಲಾಯಿತು.
ಪ್ರಸ್ತುತ ಜಗದ್ಗುರುಗಳು ಕುಲಗುರು ಶ್ರೀ ರೇವಣಸಿದ್ಧೇಶ್ವರ, ಕುಲದೈವ ಶ್ರೀ ಬೀರಲಿಂಗೇಶ್ವರ, ಏಳುಕೋಟಿ ಶ್ರೀ ಮೈಲಾರಲಿಂಗ, ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರ ಹಾಗೂ ಬ್ರಹ್ಮಲೀನ ಜಗದ್ಗುರು ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮೀಜಿಯವರ ಕರುಣಾಪೂರಿತ ಆಶೀರ್ವಾದದಿಂದ ರಾಜ್ಯಾದ್ಯಂತ ಕನಕ ಗುರುಪೀಠವು ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ವೈಚಾರಿಕವಾಗಿ ತನ್ನದೆಯಾದ ಛಾಪು ಮೂಡುವಂತೆ ಮಾಡಿ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಪ್ರಸ್ತುತ ಜಗದ್ಗುರುಗಳು ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ವ್ಯವಸ್ಥಿತವಾದ ಶಾಲೆ, ಕಾಲೇಜು, ವಸತಿ ನಿಲಯ, ಸಮುದಾಯ ಭವನ ಹಾಗೂ ಆಧ್ಯಾತ್ಮಿಕ ದೇವಸ್ಥಾನಗಳನ್ನು ನಿರ್ಮಿಸಿ ಸಂಕಲ್ಪ ಪೂರ್ಣಗೊಳಿಸಿದ್ದಾರೆ. ನಂತರ ಬೆಳ್ಳೂಡಿ, ಶ್ರೀಕ್ಷೇತ್ರ ಮೈಲಾರ, ಶಿಕಾರಿಪುರ, ಹಿರೆಕೆರೂರುಗಳಲ್ಲಿ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಿದ್ದಾರೆ.
ರಾಣೆಬೆನ್ನೂರು ಸೇರಿದಂತೆ ರಾಜ್ಯದ ಹಲವು ಕಡೆ ಶ್ರೀಮಠದ ಅಭಿವೃದ್ಧಿ ಕಾರ್ಯಕ್ಕಾಗಿ ಆಸ್ತಿ ಕಾಯ್ದಿರಿಸಿದ್ದಾರೆ. ನಂತರ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಕೇವಲ ಭಕ್ತರ ಸಹಾಯದಿಂದ ೨೧೦ ದಿನಗಳಲ್ಲಿ “ಭಕ್ತರ ಭಕ್ತಿಯ ಕುಟೀರ” ಶಾಖಾಮಠ ಸ್ಥಾಪಿಸಿ ಲೋಕಾರ್ಪಣೆಗೊಳಿಸಿದರು.
ಬೆಳ್ಳೂಡಿ ಶಾಖಾಮಠದ ಆವರಣದಲ್ಲಿ ಸರ್ಕಾರದ ಸಹಾಯದಿಂದ IAS, IPS ತರಬೇತಿ ಕೇಂದ್ರ, ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆ, ಪಿ.ಯು. ಕಾಲೇಜುಗಳನ್ನೊಳಗೊಂಡ ಬೃಹತ್ತಾದ ಕಟ್ಟಡ ಕಟ್ಟಿಸಿ, ಲೋಕಾರ್ಪಣೆ ಮಾಡಿದ್ದು. ಸಮುದಾಯದ ಅಭಿವೃದ್ಧಿಯಲ್ಲಿ ಒಂದು ಮೈಲುಗಲ್ಲಾಗಿದೆ.
ಮುಂದುವರೆದು ಜಗದ್ಗುರುಗಳು ಪುಣ್ಯಕ್ಷೇತ್ರ ಮೈಲಾರದಲ್ಲಿ ೧೫೫ ದಿನದಲ್ಲೇ “ಏಳುಕೋಟಿ ಭಕ್ತರ ಕುಟೀರ” ಕಟ್ಟುವ ಮೂಲಕ ಶಾಖಾಮಠ ಲೋಕಾರ್ಪಣೆ ಮಾಡಿದರು. ಶ್ರೀ ಕ್ಷೇತ್ರ ಮೈಲಾರದಲ್ಲಿ ವಿಸ್ತಾರವಾದ ವಸತಿಯುತ ಶ್ರೀ ಏಳುಕೋಟಿ ಶಾಲೆಯನ್ನು ನಿರ್ಮಿಸಿ, ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಹಾಗೆಯೇ ಭಕ್ತರಿಗೊಸ್ಕರ “ಶ್ರೀ ಗಂಗಮಾಳಮ್ಮ ಯಾತ್ರಿ ನಿವಾಸ” ವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.
ಈ ರೀತಿಯಾಗಿ ದಣಿವರಿಯದ ಕಾಯಕಯೋಗಿಗಳಾಗಿರುವ ಕ್ರಿಯಾಶೀಲ ಜಗದ್ಗುರುಗಳು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನಕ ಗುರುಪೀಠದ ಒಂದು ಆಧ್ಯಾತ್ಮಿಕ ಮಠವಿದ್ದರೆ ಸಮುದಾಯದಕ್ಕೊಂದು ಶಕ್ತಿ ಇದ್ದಂತೆ ಎಂದು ಮನಗಂಡು ಧೃಡ ಸಂಕಲ್ಪದಿಂದ ದಿನಾಂಕ : ೨-೭-೨೦೨೩ ಭಾನುವಾರದಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಬೆಂಗಳೂರು ದಕ್ಷಿಣ ತಾಲೂಕು ದೊಡ್ಡ ಆಲದ ಮರದ ಹತ್ತಿರದ ಕೇತೋಹಳ್ಳಿಯಲ್ಲಿ ಶಾಖಾಮಠ ನಿರ್ಮಾಣಕ್ಕೆ ಹರ – ಗುರು – ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಿದರು.
ಜಗದ್ಗುರುಗಳ ಧೃಡಸಂಕಲ್ಪದಂತೆ ಶ್ರೀಮಠದ ಭಕ್ತರು ಮತ್ತು ಸಮುದಾಯದ ಬಂಧುಗಳು ತನು – ಮನ – ಧನ ಸಹಾಯದೊಂದಿಗೆ ಶಾಖಾಮಠದ ಕಟ್ಟಡ ಪೂರ್ಣಗೊಂಡು, ದಿನಾಂಕ ೦೫ ಮತ್ತು ೦೬ ಜುಲೈ ೨೦೨೫ ರಂದು ಬೆಂಗಳೂರಿನಲ್ಲಿ “ಭಕ್ತರ ಭಂಡಾರದ ಕುಟೀರ” ಎಂಬ ಹೆಸರಿನಿಂದ ಲೋಕಾರ್ಪಣೆಗೊಂಡಿತು.
ಸರ್ವೇ ಜನಾಃ ಸುಖಿನೋ ಭವಂತು
— ಪ್ರಾಚೀನ ಭಾರತೀಯ ಸಂಸ್ಕೃತಿಯ ಮಂತ್ರ
ಶಾಲೆ, ಕಾಲೇಜು, IAS/IPS ತರಬೇತಿ ಕೇಂದ್ರ
ವಸತಿ ನಿಲಯ, ಸಮುದಾಯ ಕೇಂದ್ರಗಳು
ದೇವಸ್ಥಾನ, ಧ್ಯಾನ, ಪ್ರಾರ್ಥನಾ ಮಂದಿರ
ಕುರುಬರ ಸಂಸ್ಕೃತಿ, ಇತಿಹಾಸ, ವಚನ ಸಾಹಿತ್ಯ
“ಭಕ್ತರ ಭಕ್ತಿಯ ಕುಟೀರ” – ಕೇವಲ ೨೧೦ ದಿನಗಳಲ್ಲಿ ಭಕ್ತರ ಸಹಾಯದಿಂದ ನಿರ್ಮಾಣಗೊಂಡ ಈ ಶಾಖಾಮಠವು ಸಮುದಾಯದ ಅಭಿವೃದ್ಧಿಯಲ್ಲಿ ಒಂದು ಮಹತ್ವದ ಮೈಲುಗಲ್ಲು. ಇಲ್ಲಿ IAS, IPS ತರಬೇತಿ ಕೇಂದ್ರ, ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆ, ಪಿ.ಯು. ಕಾಲೇಜುಗಳು ಸ್ಥಾಪಿತವಾಗಿವೆ.
ಹರಿಹರ ತಾಲೂಕು, ದಾವಣಗೆರೆ ಜಿಲ್ಲೆ, ಕರ್ನಾಟಕ
ಇನ್ನಷ್ಟು ಮಾಹಿತಿ