ಸಮುದಾಯದ ಇತಿಹಾಸ ಪುರುಷರು – ಶ್ರೀಕನಕಗುರುಪೀಠ
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ  |  ಸರ್ವೇ ಜನಾಃ ಸುಖಿನೋ ಭವಂತು
Sri Kanaka Guru Peeta Logo
ಶ್ರೀಕನಕಗುರುಪೀಠ Śrī Kānakagurupīṭha
ಐತಿಹಾಸಿಕ ವೈಭವ

ಸಮುದಾಯದ ಇತಿಹಾಸ ಪುರುಷರು

ಹಾಲುಮತ ಸಮುದಾಯದ ಹೆಮ್ಮೆಯ ಕಣ್ಣುಗಳು – ತ್ಯಾಗ, ಸೇವೆ ಮತ್ತು ಆಧ್ಯಾತ್ಮಿಕ ಉದಾತ್ತತೆಯ ಪ್ರತೀಕಗಳು

ರಾಜನೀತಿಜ್ಞೆ, ಶಿವಶರಣೆ, ಮಹಾದಾಸೋಹಿ – ವೀರರಾಣಿ ಅಹಲ್ಯಾಬಾಯಿ ಹೋಳ್ಕರ್

೧೮ನೇ ಶತಮಾನದ ಭಾರತೀಯ ಇತಿಹಾಸದಲ್ಲಿ ಕೇವಲ ತಮ್ಮ ಸಾಮ್ರಾಜ್ಯದ ಗಡಿಗಳನ್ನು ಕಾಯುವುದಷ್ಟೇ ಅಲ್ಲದೆ, ಅಖಂಡ ಭಾರತದ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಿದ ಅಪರೂಪದ ಧೀರ ಮಹಿಳೆ ಮಾಳ್ವಾದ ರಾಣಿ ಅಹಲ್ಯಾಬಾಯಿ ಹೋಳ್ಕರ್. ಆಡಳಿತಾವಧಿಯಲ್ಲಿ ಪ್ರಜಾಪಾಲನೆ, ದಾಸೋಹ ಮತ್ತು ಧರ್ಮ ಸಹಿಷ್ಣುತೆಗೆ ಹೊಸ ಭಾಷ್ಯ ಬರೆದ ಈ ಮಹಾನ್ ಶಿವಶರಣೆಯ ಭವ್ಯ ಜೀವನಗಾಥೆ ಇಲ್ಲಿದೆ.

ಹಿನ್ನೆಲೆ ಮತ್ತು ಬಾಲ್ಯ: ಕುರಿಗಾಹಿ ಕುಟುಂಬದಿಂದ ರಾಜಮನೆತನದತ್ತ

೧೭-೧೮ನೇ ಶತಮಾನದಲ್ಲಿ ಭಾರತೀಯ ಉಪಖಂಡವು ಮೊಘಲರ, ಬ್ರಿಟಿಷರ ಹಾಗೂ ಫ್ರೆಂಚರ ಆಕ್ರಮಣಗಳಿಗೆ ತತ್ತರಿಸಿತ್ತು. ಅಂತಹ ಸಂದಿಗ್ಧ ಕಾಲಘಟ್ಟದಲ್ಲಿ ಮರಾಠ ಸಾಮ್ರಾಜ್ಯವನ್ನು ಕಟ್ಟಲು ಪೇಷ್ವೆ ಮೊದಲನೆಯ ಬಾಜಿರಾಯ ಹಾಗೂ ಮಾಳ್ವಾದ ಅಧಿಪತಿ ಮಲ್ಹಾರರಾವ್ ಹೋಳ್ಕರ್ ಮುಂಚೂಣಿಯಲ್ಲಿದ್ದರು.

ಜನನ ಮತ್ತು ಶಿಕ್ಷಣ

೧೭೨೫ರಲ್ಲಿ ಔರಂಗಾಬಾದ್ ಜಿಲ್ಲೆಯ ಚೌಂಡಿ ಗ್ರಾಮದ ಪಟೇಲ ಮಣಕೋಜಿ ಸಿಂಧೆ ಹಾಗೂ ಸುಶೀಲಾಬಾಯಿ ದಂಪತಿಯ ಮಗಳಾಗಿ ಅಹಲ್ಯಾಬಾಯಿ ಜನ್ಮತಾಳಿದರು. ಅಂದಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ದುರ್ಲಭವಾಗಿದ್ದರೂ, ತಾಯಿಯ ಮಾರ್ಗದರ್ಶನದಲ್ಲಿ ಧಾರ್ಮಿಕ ಶಿಕ್ಷಣ ಮತ್ತು ಈಶ್ವರ ಭಕ್ತಿಯನ್ನು ಮೈಗೂಡಿಸಿಕೊಂಡರು.

ದೈವಿಕ ಭೇಟಿ ಮತ್ತು ವಿವಾಹ (೧೭೩೩)

ಚೌಂಡಿ ಗ್ರಾಮದ ಬೀರೇಶ್ವರ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ೮ ವರ್ಷದ ಬಾಲಕಿ ಅಹಲ್ಯೆಯ ಮುಖದಲ್ಲಿದ್ದ ದೈವಿಕ ತೇಜಸ್ಸು ಹಾಗೂ ಗಾಂಭೀರ್ಯವನ್ನು ಕಂಡು ಮಲ್ಹಾರರಾವ್ ಹೋಳ್ಕರ್ ಪ್ರಭಾವಿತರಾದರು. ತಮ್ಮ ಏಕಮಾತ್ರ ಪುತ್ರ ಖಂಡೇರಾಯನಿಗೆ ಆಕೆಯನ್ನು ಸೊಸೆಯಾಗಿ ಸ್ವೀಕರಿಸಿದರು.

ಯುದ್ಧಕೌಶಲ, ರಾಜನೀತಿ ಮತ್ತು ಅಧಿಕಾರ ಸ್ವೀಕಾರ

ಗಂಡ ಖಂಡೇರಾಯನ ದುಶ್ಚಟಗಳನ್ನು ತಿದ್ದುತ್ತಾ, ಮಾವ ಮಲ್ಹಾರರಾವ್ ಅವರ ಮಾರ್ಗದರ್ಶನದಲ್ಲಿ ಅಹಲ್ಯಾಬಾಯಿ ಯುದ್ಧ ತಂತ್ರಗಳು, ರಾಜಶಾಸ್ತ್ರ ಮತ್ತು ಆಡಳಿತ ನೈಪುಣ್ಯವನ್ನು ಕರಗತ ಮಾಡಿಕೊಂಡರು.

೧೭೫೪ರಲ್ಲಿ ಪತಿ ಖಂಡೇರಾಯ ಯುದ್ಧದಲ್ಲಿ ಮರಣ ಹೊಂದಿದಾಗ, ಅಹಲ್ಯಾಬಾಯಿ ಸತಿ ಹೋಗಲು ನಿರ್ಧರಿಸಿದ್ದರು. ಆದರೆ, ಮಾವ ಮಲ್ಹಾರರಾವ್ ಅವರ ಕೋರಿಕೆಯಂತೆ ಆ ನಿರ್ಧಾರವನ್ನು ಕೈಬಿಟ್ಟು, ರಾಜ್ಯದ ಜವಾಬ್ದಾರಿ ಹೊತ್ತರು.

“ನಾನು ಅಬಲೆಯಲ್ಲ, ನನ್ನ ಮಹಿಳಾ ಸೇನೆಯೇ ನಿಮ್ಮನ್ನು ಎದುರಿಸಲಿದೆ. ಸೋತರೆ ನಿಮಗೇ ಕಳಂಕ!”
— ಅಹಲ್ಯಾಬಾಯಿ, ರಘೋಬಾ ಪೇಶ್ವೆಯವರಿಗೆ ಬರೆದ ರಾಜನೀತಿಯ ಪತ್ರ

೧೭೬೬ರಲ್ಲಿ ಮಾವ ಮಲ್ಹಾರರಾವ್ ಹಾಗೂ ತದನಂತರ ಮಗ ಮಾಲೇರಾವ್ ನಿಧನರಾದಾಗ, ಇಂದೂರಿನ ಅಧಿಪತ್ಯವನ್ನು ಕಬಳಿಸಲು ರಘೋಬಾ ಪೇಶ್ವೆ ಮತ್ತು ಗಂಗಾಧರ ಚಂದ್ರಚೂಡ ಹುನ್ನಾರ ನಡೆಸಿದರು. ಇದನ್ನು ದಿಟ್ಟವಾಗಿ ಎದುರಿಸಿದ ಅಹಲ್ಯಾಬಾಯಿ ತಮ್ಮ ರಾಜನೀತಿಯ ಪತ್ರದ ಮೂಲಕ ಶತ್ರುಗಳನ್ನು ಹಿಮ್ಮೆಟ್ಟಿಸಿದರು.

ಮಹೇಶ್ವರ ರಾಜಧಾನಿ ಮತ್ತು ಸಮಗ್ರ ಪ್ರಜಾಪಾಲನೆ

ನರ್ಮದಾ ನದಿಯ ದಂಡೆಯ ಮೇಲಿರುವ ಪುರಾತನ ‘ಮಹೇಶ್ವರ’ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡ ಅಹಲ್ಯಾಬಾಯಿ, ಪ್ರಜೆಗಳನ್ನು ಸ್ವಂತ ಮಕ್ಕಳಂತೆ ಪಾಲಿಸಿದರು.

ಆಡಳಿತ ಮುದ್ರೆ

ಆಕೆಯ ಪ್ರತಿಯೊಂದು ರಾಜಾಜ್ಞೆಯೂ “ಶ್ರೀ ಶಂಕರ” ಎಂಬ ಸಹಿಯೊಂದಿಗೆ ಹೊರಬೀಳುತ್ತಿತ್ತು. ಆಡಳಿತವನ್ನು ಭಗವಂತನ ಸೇವೆಯೆಂದು ಭಾವಿಸಿದ್ದರು.

ಕಲಾವಿದರು ಮತ್ತು ನೇಯ್ಗೆದಾರರಿಗೆ ಆಶ್ರಯ

ಸಾಹಿತಿಗಳು, ಕವಿಗಳು, ಶಿಲ್ಪಿಗಳು ಹಾಗೂ ನೇಯ್ಗೆದಾರರಿಗೆ ಮಹೇಶ್ವರದಲ್ಲಿ ಆಶ್ರಯ ನೀಡಿದರು. ಇಂದಿನ ಪ್ರಸಿದ್ಧ ‘ಮಹೇಶ್ವರಿ ಸೀರೆ’ಗಳ ಕಲ್ಪನೆಗೆ ಇವರ ಪ್ರೋತ್ಸಾಹವೇ ಅಡಿಪಾಯ.

ಮಹಿಳಾ ಸಬಲೀಕರಣ ಮತ್ತು ನ್ಯಾಯನಿಷ್ಠೆ

ಮಹಿಳೆಯರ ಆಸ್ತಿ ಹಕ್ಕಿಗಾಗಿ ಕಾಯ್ದೆಗಳನ್ನು ರೂಪಿಸಿದರು. ಹಣಕಾಸಿನ ಅವ್ಯವಹಾರದಲ್ಲಿ ತೊಡಗಿದಾಗ ಸ್ವಂತ ಪತಿಯನ್ನೂ ಶಿಕ್ಷಿಸುವಷ್ಟು ನಿಷ್ಪಕ್ಷಪಾತ ನ್ಯಾಯವಾದಿಯಾಗಿದ್ದರು.

ಮಹಾದಾಸೋಹಿ: ಅಖಂಡ ಭಾರತದಲ್ಲಿ ಅನ್ನಛತ್ರಗಳು ಮತ್ತು ಧರ್ಮಕಾರ್ಯಗಳು

ಅಹಲ್ಯಾಬಾಯಿಯ ದಾನಧರ್ಮ ಮತ್ತು ಸೇವೆಯ ಕ್ಷೇತ್ರ ಕೇವಲ ಮಾಳ್ವ ಸಂಸ್ಥಾನಕ್ಕೆ ಸೀಮಿತವಾಗಿರಲಿಲ್ಲ. ಅಖಂಡ ಭಾರತದಾದ್ಯಂತ ಅವರ ದಾಸೋಹ ಹರಡಿಕೊಂಡಿತ್ತು:

  • ಅನ್ನಛತ್ರಗಳು: ಬದರಿ, ಕೇದಾರನಾಥ, ರಾಮೇಶ್ವರ, ಜಗನ್ನಾಥಪುರಿ, ದ್ವಾರಕಾ, ಅಮರಕಂಟಕ, ಉಜ್ಜಯಿನಿ, ಪುಷ್ಕರ, ಪಂಡರಪುರ, ಕರ್ನಾಟಕ ಮುಂತಾದ ಕಡೆಗಳಲ್ಲಿ ನಿರಂತರ ಅನ್ನಛತ್ರಗಳನ್ನು ಸ್ಥಾಪಿಸಿದರು.
  • ಗಂಗಾಜಲ ವಿತರಣೆ: ಗಂಗೋತ್ರಿಯಿಂದ ಕಾವಡಿಯ ಮೂಲಕ ದೇಶದ ಪ್ರಮುಖ ಜ್ಯೋತಿರ್ಲಿಂಗಗಳು ಮತ್ತು ಧಾಮಗಳಿಗೆ (ಗೋಕರ್ಣ, ಮಹಾಬಲೇಶ್ವರ, ಶ್ರೀಶೈಲ, ನಾಸಿಕ, ಸಿದ್ದೇಶ್ವರ, ಜೆಜುರಿ ಇತ್ಯಾದಿ) ನಿರಂತರ ಗಂಗಾಜಲ ತಲುಪಿಸುವ ಶಾಶ್ವತ ವ್ಯವಸ್ಥೆ.
  • ಪ್ರಾಣಿ-ಪಕ್ಷಿ ಪ್ರೇಮ: ದನಕರುಗಳಿಗೆ ಮೇಯಲು ಭೂಮಿ, ಪಕ್ಷಿಗಳಿಗೆ ಧಾನ್ಯದ ಸಂಗ್ರಹ ಹಾಗೂ ನದಿಯ ಮೀನುಗಳಿಗೆ ಹಿಟ್ಟಿನ ಗುಳಿಗೆಗಳನ್ನು ನೀಡಲು ಪ್ರತ್ಯೇಕ ಕಾರ್ಯಕರ್ತರನ್ನು ನೇಮಿಸಿದ್ದರು.
  • ಶಾಶ್ವತ ಆಡಳಿತ ವ್ಯವಸ್ಥೆ: ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳು ರಾಜಕೀಯ ಬದಲಾವಣೆಗಳಿಂದ ನಿಂತುಹೋಗಬಾರದೆಂದು, ಅವುಗಳನ್ನು ಸ್ವತಂತ್ರ ಟ್ರಸ್ಟ್ಗಳ ರೂಪದಲ್ಲಿ ವಂಶಪಾರಂಪರ್ಯ ನಿರ್ವಹಣೆಗೆ ವಹಿಸಿದರು. ಅದಕ್ಕಾಗಿಯೇ ೨೦೦ ವರ್ಷಗಳ ನಂತರವೂ ಅವರ ಸೇವಾ ಕಾರ್ಯಗಳು ಮುಂದುವರಿದಿವೆ.

ಧರ್ಮ ಸಹಿಷ್ಣುತೆ ಮತ್ತು ಜ್ಯೋತಿರ್ಲಿಂಗಗಳ ಜೀರ್ಣೋದ್ಧಾರ

ಅಹಲ್ಯಾಬಾಯಿ ಹೋಳ್ಕರ್ ಭಾರತದಲ್ಲಿ ಹಿಂದುತ್ವ ಹಾಗೂ ವೈದಿಕ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದ ಮಹಾನ್ ಶಕ್ತಿ.

೧೨ ಜ್ಯೋತಿರ್ಲಿಂಗಗಳ ಜೀರ್ಣೋದ್ಧಾರ

ಪಾಳುಬಿದ್ದಿದ್ದ ಮತ್ತು ಧ್ವಂಸಗೊಂಡಿದ್ದ ಭಾರತದ ೧೨ ಜ್ಯೋತಿರ್ಲಿಂಗ ದೇವಾಲಯಗಳನ್ನು ಮರುನಿರ್ಮಾಣ ಮಾಡಿದರು.

ಕಾಶಿ ವಿಶ್ವನಾಥ ದೇವಾಲಯ

ಮೊಘಲರ ಆಕ್ರಮಣದಿಂದ ಧ್ವಂಸಗೊಂಡು ೩೦೦ ವರ್ಷಗಳ ಕಾಲ ಪಾಳುಬಿದ್ದಿದ್ದ ಕಾಶಿಯ ವಿಶ್ವನಾಥ ದೇವಾಲಯದ ಜಾಗವನ್ನು ಖರೀದಿಸಿ, ನೂತನ ಮಂದಿರ ನಿರ್ಮಿಸಿ ಗೋಪುರಕ್ಕೆ ಚಿನ್ನದ ತಗಡು ಹೊದಿಸಿದರು.

ಧರ್ಮ ಸಹಿಷ್ಣುತೆ

ತಮ್ಮ ರಾಜ್ಯದಲ್ಲಿದ್ದ ಮುಸ್ಲಿಂ ಪ್ರಜೆಗಳಿಗೆ, ಮೌಲ್ವಿಗಳಿಗೆ, ಫಕೀರರಿಗೆ ಮತ್ತು ಮಸೀದಿಗಳಿಗೆ ಜಾಗೀರುಗಳನ್ನು ನೀಡಿ ಪೂರ್ಣ ರಕ್ಷಣೆ ಕೊಟ್ಟರು. ಧರ್ಮ ಸಹಿಷ್ಣುತೆಗೆ ಆದರ್ಶಪ್ರಾಯರಾಗಿದ್ದರು.

ಜೀವನಾವಸಾನ ಮತ್ತು ಮಹಾನ್ ಪರಂಪರೆ

ತಮ್ಮ ಜೀವನದ ಕೊನೆಯ ದಿನಗಳವರೆಗೂ ನಿತ್ಯ ಈಶ್ವರ ಪೂಜೆ, ಪುರಾಣ ಶ್ರವಣ ಮತ್ತು ದಾನಧರ್ಮಗಳಲ್ಲಿ ನಿರತರಾಗಿದ್ದ ಅಹಲ್ಯಾಬಾಯಿಯವರು, ೩೧ ಆಗಸ್ಟ್ ೧೭೯೫ರಂದು (ಶ್ರಾವಣ ಚತುರ್ದಶಿ) ತಮ್ಮ ೭೦ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

“ಇದೆಲ್ಲವೂ ನನ್ನದಲ್ಲ; ಭಗವಂತನದ್ದು. ನಾನು ಪ್ರಜೆಗಳಿಂದ ಪಡೆಯುವುದು ನನ್ನ ಮೇಲಿರುವ ಋಣ, ಅದನ್ನು ತೀರಿಸುವುದಷ್ಟೇ ನನ್ನ ಕರ್ತವ್ಯ.”
— ರಾಷ್ಟ್ರಮಾತೆ ಅಹಲ್ಯಾಬಾಯಿ ಹೋಳ್ಕರ್
  • ಆಡಳಿತಾವಧಿ: ೩೪ ವರ್ಷಗಳ ಕಾಲ (೨೮ ವರ್ಷ ರಾಣಿಯಾಗಿ, ೭ ವರ್ಷ ಜಹಗೀರುದಾರರಾಗಿ) ಯಶಸ್ವಿ ಶಾಸಕಿಯಾಗಿ ಲೋಕಕಲ್ಯಾಣ ಮಾಡಿದರು.
  • ಶಿವಮಂದಿರಗಳ ನಿರ್ಮಾಣ: ತಮ್ಮ ಜೀವಿತಾವಧಿಯಲ್ಲಿ ೩,೧೧೫ಕ್ಕೂ ಹೆಚ್ಚು ಶಿವಮಂದಿರಗಳನ್ನು ನಿರ್ಮಿಸಿದ ಅಪ್ರತಿಮ ದಾಖಲೆ.
  • ವಿಶ್ವ ದಾಖಲೆ: ಜಗತ್ತಿನ ಇತಿಹಾಸದಲ್ಲಿಯೇ ಇಷ್ಟೊಂದು ಸುದೀರ್ಘ ಕಾಲ ಸುಭದ್ರ ಹಾಗೂ ಜನರಂಜಕ ಆಡಳಿತ ನೀಡಿದ ಮಹಿಳಾ ಶಾಸಕಿ ಮತ್ತೊಬ್ಬರಿಲ್ಲ.

ಆಕೆಯ ತ್ಯಾಗ, ಸೇವೆ ಮತ್ತು ನಿಸ್ವಾರ್ಥ ಪ್ರಜಾಪಾಲನೆ ಭಾರತೀಯ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಇಂತಹ ಮಹಾನ್ ಶಿವಶರಣೆ, ವೀರರಾಣಿಯನ್ನು ಪಡೆದ ಭಾರತ ಭೂಮಿ ಧನ್ಯ.

೧೨ನೆಯ ಶತಮಾನದ ಶ್ರೇಷ್ಠ ವಚನಕಾರ – ತುರುಗಾಹಿ ರಾಮಣ್ಣ

೧೨ನೆಯ ಶತಮಾನದ ವಚನ ಚಳವಳಿಯಲ್ಲಿ ಪ್ರತಿಯೊಂದು ಕಾಯಕಕ್ಕೂ ತನ್ನದೇ ಆದ ಪವಿತ್ರತೆ ಮತ್ತು ಗೌರವವಿತ್ತು. ಅಂತಹ ಕಾಯಕಯೋಗಿಗಳಲ್ಲಿ ಹಾಲುಮತ (ಕುರುಬ) ಸಮುದಾಯದ ಹೆಮ್ಮೆಯ ಕಣ್ಣು, ಶ್ರೇಷ್ಠ ವಚನಕಾರ ತುರುಗಾಹಿ ರಾಮಣ್ಣ ಅತ್ಯಂತ ವಿಶಿಷ್ಟವಾದ ಶಿವಶರಣರು. ಶಿವಶರಣರ ದನ-ಕರುಗಳನ್ನು ಕಾಯುವ ಕಾಯಕವನ್ನು ಮಾಡುತ್ತಲೇ, ಕಾಯಕದಲ್ಲಿ ದಿವ್ಯಾನುಭವ ಮತ್ತು ಮುಕ್ತಿಯನ್ನು ಕಂಡುಕೊಂಡ ಅಪರೂಪದ ಅನುಭಾವಿ ಇವರು.

ಮೂಲ ಪರಿಚಯ ಮತ್ತು ಕಾಲ

ಕಾಲ

ಸು. ೧೧೬೦ (ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದವರ ಸಮಕಾಲೀನ).

ಸಮುದಾಯ

ಹಾಲುಮತ (ಕುರುಬ) ಸಮುದಾಯ.

ಕಾಯಕ

ಶಿವಶರಣರ ಮನೆಗಳ ದನ-ಕರುಗಳನ್ನು ಕಾಯುವುದು.

ಅಂಕಿತನಾಮ

ಗೋಪತಿನಾಥ ವಿಶ್ವೇಶ್ವರಲಿಂಗ

ಲಭ್ಯವಿರುವ ವಚನಗಳು

೪೫ ವಚನಗಳು

ಜೀವನ ಮತ್ತು ಕಾಯಕ ನಿಷ್ಠೆ

ತುರುಗಾಹಿ ರಾಮಣ್ಣನವರದ್ದು ಅತ್ಯಂತ ಸರಳ ಮತ್ತು ನಿರಾಡಂಬರ ಜೀವನ. ಹಾಲುಮತ ಸಂಸ್ಕೃತಿಯ ಸಹಜ ಗುಣವಾದ ಪ್ರಕೃತಿ ಪ್ರೀತಿ ಹಾಗೂ ಜೀವದಯೆ ಇವರ ರಕ್ತದಲ್ಲೇ ಇತ್ತು. ನಿತ್ಯವೂ ಬೆಳಿಗ್ಗೆ ಶರಣರ ಮನೆಗಳ ಬಾಗಿಲಿಗೆ ಹೋಗಿ, “ಕಟ್ಟಿದ ಹಸು, ಕೂಡಿದ ಹಸು ಬಿಡಿರೆ…” ಎಂದು ಕೂಗಿ ಕರೆಯುತ್ತಿದ್ದರು. ಶರಣರ ಮನೆಯ ಸತಿಯರು ಬಿಟ್ಟ ದನಗಳನ್ನು ದಿನವಿಡೀ ಬೆಟ್ಟ-ಗುಡ್ಡಗಳಲ್ಲಿ ಮೇಯಿಸಿ, ಸಂಜೆ ಸುರಕ್ಷಿತವಾಗಿ ದೊಡ್ಡಿಗಳಿಗೆ ತಂದು ತಲುಪಿಸುತ್ತಿದ್ದರು.

  • ವೃತ್ತಿ ಧರ್ಮ: ಹಸುವಿಗೆ ಒಂದು ‘ಹಾಗ’, ಎತ್ತಿಗೆ ‘ಹಣವಡ್ಡ’, ಕರುವಿಗೆ ‘ಮೂರು ಹಣ’ ಹೀಗೆ ನಿಗದಿತ ಕೂಲಿಯನ್ನು ಪಡೆದು ಜೀವನ ನಡೆಸುತ್ತಿದ್ದರು.
  • ಜೀವನ ಸೂತ್ರ: “ಅವಕಾವಲ್ಲಿಯಾದರೂ ಭಾವಶುದ್ಧವಾಗಿರಬೇಕು” ಎಂಬ ಪ್ರಮುಖ ತತ್ವವನ್ನು ನೆಚ್ಚಿಕೊಂಡು, ದನ ಕಾಯುವ ಸಣ್ಣ ಕೆಲಸದಲ್ಲೇ ಮಹತ್ತರವಾದ ಅಧ್ಯಾತ್ಮಿಕ ಎತ್ತರವನ್ನು ತಲುಪಿದರು.

ವಚನಗಳ ವೈಶಿಷ್ಟ್ಯ ಮತ್ತು ಸಾಹಿತ್ಯ ಕೊಡುಗೆ

ರಾಮಣ್ಣನವರ ವಚನಗಳು ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ (೪೫ ವಚನಗಳು), ಸತ್ತ್ವ ಮತ್ತು ಅನುಭವದ ದೃಷ್ಟಿಯಿಂದ ಅತ್ಯಂತ ಸಮೃದ್ಧವಾಗಿವೆ.

ಕಾಯಕದ ದಿವ್ಯಾನುಭವ

ಮೊದಲ ೧೭ ವಚನಗಳು ಇವರ ದನ ಕಾಯುವ ಕಾಯಕಕ್ಕೆ ಸಂಬಂಧಿಸಿವೆ. ಅತ್ತಿತ್ತ ಓಡಾಡುವ ನೂರಾರು ತಳಿಯ, ನೂರಾರು ಹಸುಗಳನ್ನು ಕೇವಲ ಒಂದೇ ಒಂದು ಕೋಲಿನಿಂದ ನಿಯಂತ್ರಿಸುವಂತೆ, ಮನುಷ್ಯನು ತನ್ನ ಚಂಚಲ ಮನಸ್ಸನ್ನು ಏಕಚಿತ್ತದಿಂದ ನಿಯಂತ್ರಿಸಿ ಲಿಂಗವನ್ನು ಅರಿಯಬೇಕು ಎಂದು ಸಾಂಕೇತಿಕವಾಗಿ ನಿರೂಪಿಸಿದ್ದಾರೆ.

ಆಧ್ಯಾತ್ಮಿಕ ತತ್ವಗಳು

ಇವರ ವಚನಗಳಲ್ಲಿ ನಿಷ್ಠೆ, ತ್ರಿವಿಧಭಕ್ತಿ, ಷಟ್ಸ್ಥಲ, ಕ್ರೀಶುದ್ಧಿ, ಭಾವಶುದ್ಧಿ, ಚಿತ್ತಶುದ್ಧಿ ಹಾಗೂ ಭೇದಾಭೇದ ಭಾವಗಳ ಕುರಿತು ಗಂಭೀರವಾದ ಚರ್ಚೆಯಿದೆ.

ಹಾಲುಮತ ಸಂಸ್ಕೃತಿ ಮತ್ತು ವೃತ್ತಿ ಪರಿಭಾಷೆ

ಗೋವಳಿಗನಾಗಿ ಹಸುಗಳನ್ನು ಕರೆಯುವ ವಿಧಾನ, ಬೆಟ್ಟದ ತಪ್ಪಲಿನಲ್ಲಿ ಹುಲಿ ಹಿಡಿಯುವುದು, ಗೋವುಗಳ ದಶವರ್ಣ, ಸಂಜ್ಞೆಗಳು, ಗರ್ಜನೆ ಮತ್ತು ತೊಂಡು ಹೋಗದಂತೆ ಕಾಯುವ ಕೌಶಲ್ಯಗಳನ್ನು ಆಧ್ಯಾತ್ಮಿಕ ಭಾಷೆಯಾಗಿ ಬಳಸಿಕೊಂಡಿದ್ದಾರೆ.

ಐತಿಹಾಸಿಕ ಮಹತ್ವದ ವಚನ

ಕಲ್ಯಾಣದ ಕ್ರಾಂತಿಯ ನಂತರದ ಘಟನೆಗಳನ್ನು ದಾಖಲಿಸುವಲ್ಲಿ ತುರುಗಾಹಿ ರಾಮಣ್ಣನವರ ವಚನವೊಂದು ಅತ್ಯಂತ ಪ್ರಮುಖ ಐತಿಹಾಸಿಕ ಆಧಾರವಾಗಿದೆ (ವಚನ ಸಂಖ್ಯೆ: ೧೦೨೫). ಕಲ್ಯಾಣದ ಗಲಭೆಯ ನಂತರ ಪ್ರಮುಖ ಶರಣರು ಎಲ್ಲಿಗೆ ತೆರಳಿದರು ಎಂಬುದನ್ನು ಈ ಕೆಳಗಿನ ವಚನ ಸ್ಪಷ್ಟವಾಗಿ ತಿಳಿಸುತ್ತದೆ:

ಬಂದಿತ್ತು ದಿನ ಬಸವಣ್ಣ ಕಲ್ಲಿಗೆ
ಚೆನ್ನಬಸವಣ್ಣ ಉಳುವೆಯಲ್ಲಿಗೆ
ಪ್ರಭು ಅಕ್ಕ ಕದಳಿ ದ್ವಾರಕ್ಕೆ
ಮಿಕ್ಕಾದ ಪ್ರಮತರೆಲ್ಲರೂ ತಮ್ಮ ಲಕ್ಷ್ಯಕ್ಕೆ
ನಾ ತುರುವನ ಬೆಂಬಳಿಯಲ್ಲಿ, ಹೋದ ಮರೆಯಲ್ಲಿ
ಅಡಗಿಹರೆಲ್ಲರು, ಅಡಗಿದುದ ಕೇಳಿ ನಾ
ಗೋಪತಿನಾಥ ಲಿಂಗದಲ್ಲಿಯೇ ಉಡುಗುವೆನು.
— ತುರುಗಾಹಿ ರಾಮಣ್ಣ, ವಚನ ಸಂಖ್ಯೆ: ೧೦೨೫

ವಿವರಣೆ

ಕಲ್ಯಾಣದ ಕ್ರಾಂತಿಯ ನಂತರ ಬಸವಣ್ಣನವರು ‘ಕಲ್ಲಿಗೆ’ (ಕೂಡಲಸಂಗಮ), ಚೆನ್ನಬಸವಣ್ಣನವರು ‘ಉಳುವಿ’ಗೆ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ‘ಕದಳಿ ದ್ವಾರಕ್ಕೆ’ (ಶ್ರೀಶೈಲ) ಹಾಗೂ ಇತರ ಶರಣರು ತಮ್ಮ ಗುರಿ ಕಂಡತ್ತ ಐಕ್ಯರಾಗಲು ತೆರಳಿದರು ಎಂಬ ಐತಿಹಾಸಿಕ ಸತ್ಯವನ್ನು ಈ ವಚನ ಸಾಬೀತುಪಡಿಸುತ್ತದೆ.

ಹಾಲುಮತ ಸಮುದಾಯದ ಶ್ರೇಷ್ಠ ಶರಣ ತುರುಗಾಹಿ ರಾಮಣ್ಣನವರು ಕೇವಲ ದನ ಕಾಯುವ ಗೋವಳಿಗನಾಗಿರಲಿಲ್ಲ, ಬದಲಿಗೆ ಕಾಯಕವನ್ನೇ ಕೈಲಾಸ ಮಾಡಿಕೊಂಡ ಮಹಾನ್ ಜ್ಞಾನಿ.
ತಾನು ಮಾಡುವ ಕಾಯಕದಲ್ಲೇ ತೃಪ್ತಿ, ಗೌರವ ಮತ್ತು ಅಧ್ಯಾತ್ಮವನ್ನು ಕಂಡುಹಿಡಿದು ಮುಕ್ತಿ ಪಡೆದ ಇವರ ಜೀವನ ಮತ್ತು ವಚನಗಳು ಇಂದಿಗೂ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿವೆ.
Scroll to Top