ಸಮಾಜ ಜಾಗೃತಿ, ಧಾರ್ಮಿಕ ಪುನರುಜ್ಜೀವನ, ಶಿಕ್ಷಣ ಮತ್ತು ಸಾಮಾಜಿಕ ಸಾಮರಸ್ಯದ ಅದ್ವಿತೀಯ ಪ್ರತೀಕ
ಜನನ: 10 ಏಪ್ರಿಲ್ 1977 | ಪೀಠಾರೋಹಣ: 29 ಅಕ್ಟೋಬರ್ 2006
ಆದಿಜಗಕ್ಕೆಲ್ಲ ಮೊದಲು ಹುಟ್ಟಿದ ಕುರುಬ ಕುಲದ ಕುಲ ಗುರುಗಳಾದ ಮತ್ತು ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ಪರಮ ಆರಾಧಕರಾಗಿದ್ದ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯ ಶ್ರೀ ಗುರುಸಿದ್ದಯ್ಯ ಒಡೆಯರ್ ಮತ್ತು ಶ್ರೀಮತಿ ರುದ್ರಾಯಣಮ್ಮ ದಂಪತಿಯ ಪವಿತ್ರ ಉದರದಲ್ಲಿ ನಾಲ್ಕನೆಯ ಮಗುವಾಗಿ ಶ್ರೀ ರೇವಣಸಿದ್ದೇಶ್ವರರ ಕಾರುಣ್ಯದಿಂದ 10 ಏಪ್ರಿಲ್ 1977ರ “ಶಿವ”ಯೋಗದಲ್ಲಿ ಶ್ರೀವಿಕ್ರಮ ಸಂವತ್ಸರದ ಹೊಸ ವಸಂತದಲ್ಲಿ ಅವತರಿಸಿ ಜನ್ಮತಾಳಿದವರು ಜಗದ್ಗುರು ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು.
ಹಾಲುಮತ ಸಮಾಜದ ಧರ್ಮಗುರುಗಳಾಗಿದ್ದ ಪೋಷಕರ ಸಚ್ಚಾರಿತ್ರ್ಯ, ಸದಾಚಾರ, ಸಂಸ್ಕಾರ, ಸದ್ಗುಣ, ನಿಷ್ಕಾಮ ಕರ್ಮಗಳು ಬಾಲ್ಯದಲ್ಲಿಯೇ ಶ್ರೀಗಳ ಮೇಲೆ ಪ್ರಭಾವ ಬೀರಿ, ಅಪ್ಪಟ ದೈವ ಭಕ್ತರನ್ನಾಗಿಸಲು ಪೂರ್ವಾಶ್ರಮದ ಪರಿಸರವೇ ಪ್ರೇರಣೆಯಾಯಿತು. ಶ್ರೀಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿದರು.
ಶ್ರೀಗಳ ಪೂರ್ವಾಶ್ರಮದ ತಂದೆಯಾದ ಶ್ರೀ ಗುರುಸಿದ್ದಯ್ಯ ಒಡೆಯರ್ ಅವರು ಆಗ ತಾನೇ ಸ್ಥಾಪನೆಯಾಗುತ್ತಿದ್ದ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠಕ್ಕೆ ನಿರಂಜನ ಒಡೆಯರ್ ಅವರನ್ನು ದತ್ತು ನೀಡಲು ತೀರ್ಮಾನಿಸಿದರು. 4 ಜನವರಿ 1992 ರಂದು ಹರ-ಗುರು-ಚರ ಮೂರ್ತಿಗಳ ಧರ್ಮಸಭೆಯಲ್ಲಿ ಶ್ರೀಗಳನ್ನು ಪ್ರಥಮ ವಟುವಾಗಿ ಸ್ವೀಕರಿಸಲಾಯಿತು.
“ಹಾಡಿದರೆ ಎನ್ನೊಡೆಯ ರೇವಣಸಿದ್ಧೇಶ್ವರರ ಹಾಡುವೆ” “ಬೇಡಿದರೆ ಎನ್ನೊಡೆಯ ರೇವಣಸಿದ್ಧೇಶ್ವರರ ಬೇಡುವೆ” ಎಂದು ಶ್ರೀಗಳು ತಮ್ಮನ್ನು ತಾವು ಸಮಾಜಕ್ಕೆ ಸಮರ್ಪಿಸಿಕೊಂಡರು.
ದತ್ತುಕ ಆದ ಶ್ರೀಗಳು ಉಜ್ವಲ ತಪಸ್ವಿಗಳು, ಬ್ರಹ್ಮ ಜ್ಞಾನಿಗಳಾದ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿದೇವಿಯ ವರಪುತ್ರರಾದ ಶ್ರೀ ತಿರುಚಿ ಮಹಾಸ್ವಾಮಿಗಳ ಆಶ್ರಮದಲ್ಲಿ ಆಶ್ರಯ ಪಡೆದು ಪ್ರೌಢಶಿಕ್ಷಣವನ್ನು ಮುಗಿಸಿದರು. ಮುಂದೆ ಸಂಸ್ಕೃತ ಅಧ್ಯಯನಕ್ಕಾಗಿ ಹರಿದ್ವಾರಕ್ಕೆ ಹೋಗಿ, ತಂಗುದಾಣ, ದೇವಾಲಯ, ಆಶ್ರಮಗಳಲ್ಲಿ, ಸಾಧುಸಂತರ, ಅಘೋರಿಗಳ ಜೊತೆಗಿದ್ದು ಆಧ್ಯಾತ್ಮಿಕ ಹಸಿವು ನೀಗಿಸಿಕೊಂಡು, ಕಾಲಬದ್ಧ ಶಿಸ್ತನ್ನು ಮೈಗೂಡಿಸಿಕೊಂಡು ಬಹುಶ್ರುತ ಪಾಂಡಿತ್ಯವನ್ನು ಪಡೆದರು.
“ದೇಶ ಸುತ್ತು ಇಲ್ಲ ಕೋಶ ಓದು” ಎಂಬಂತೆ ಶ್ರೀಗಳು ಬದರಿ, ಕೇದಾರ, ಗಂಗೋತ್ರಿ, ಯಮನೋತ್ರಿ, ಕುರುಕ್ಷೇತ್ರ, ಕಾಶಿ, ಮಧುರಾ, ಬೃಂದಾವನ, ಜಮ್ಮುವಿನ ವೈಷ್ಣವಿ ದೇವಸ್ಥಾನ – ದೇಶದ ಉದ್ದಗಲಕ್ಕೂ ಇರುವ ಸನಾತನ ಹಿಂದೂ ಪುಣ್ಯಕ್ಷೇತ್ರಗಳಲ್ಲಿ ಸಂಚರಿಸಿ ಧಾರ್ಮಿಕ ಸಂಸ್ಕಾರದಲ್ಲಿ ಹದಗೊಂಡು ಆಧ್ಯಾತ್ಮಿಕ ಬದುಕನ್ನು ಗಟ್ಟಿಗೊಳಿಸಿಕೊಂಡರು.
2000 ನೇ ಇಸವಿಯಲ್ಲಿ ತಾಯ್ನಾಡಾದ ಕರ್ನಾಟಕದ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠಕ್ಕೆ ಮರಳಿ, 2001 ಮಾರ್ಚ್ 3 ರಂದು ಪ್ರಥಮ ಜಗದ್ಗುರುಗಳಿಂದ ಸನ್ಯಾಸ ದೀಕ್ಷೆ ಪಡೆದು ಕುರುಬ ಸಮಾಜದ ಉದ್ದಾರಕ್ಕೆ ಕಂಕಣಬದ್ಧರಾಗಿ, ಜಗದ್ಗುರುಗಳ ಕರಕಮಲ ಸಂಜಾತರಾಗಿ ಸೇವೆ ಸಲ್ಲಿಸತೊಡಗಿದರು.
ಈ ಸಂದರ್ಭದಲ್ಲಿ ಅಕಾಲಿಕ ಅನಾರೋಗ್ಯದಿಂದ ಪ್ರಥಮ ಜಗದ್ಗುರುಗಳು ಬ್ರಹ್ಮಲೀನರಾದರು. 29 ಅಕ್ಟೋಬರ್ 2006 ರಂದು ಸೌಹಾರ್ದ ಶ್ರೀಕನಕಗುರುಪೀಠಕ್ಕೆ ಎರಡನೆಯ ಜಗದ್ಗುರುಗಳಾಗಿ ಲಕ್ಷೋಪಲಕ್ಷ ಭಕ್ತರ ಜೈಕಾರಗಳೊಂದಿಗೆ ಶ್ರೀರೇವಣಸಿದ್ಧೇಶ್ವರರ ಸಿಂಹಾಸನಾಧೀಶ್ವರರಾಗಿ ಪೀಠಾರೋಹಣ ಮಾಡಿದ ಅಮೃತ ಘಳಿಗೆ ಇಡೀ ಕುರುಬ ಸಮಾಜದ ದಿಕ್ಕನ್ನು ಬದಲಾಯಿಸಿತು.
“ಸಾಮಾನ್ಯ ಭಕ್ತರ ಅನನ್ಯ ಭಕ್ತಿ – ಶ್ರೀಮಠದ ಅಕ್ಷಯ ಶಕ್ತಿ” ಎಂದು ಜನಸಾಮಾನ್ಯರಲ್ಲಿ ಒಬ್ಬರಾಗಿ, ಶ್ರೀ ಭಕ್ತ ಕನಕದಾಸರ ಜಯಂತೋತ್ಸವ, ಶ್ರೀ ಕನಕಮಾಲೆ ಅಭಿಯಾನ, ಜಾತ್ರಾ ವಾರ್ಷಿಕೋತ್ಸವಗಳ ಮೂಲಕ ಸಮಾಜವನ್ನು ಸಂಘಟಿಸುತ್ತಿದ್ದಾರೆ. ಮರೆಯಾಗುತ್ತಿದ್ದ ಹಾಲುಮತದ ಇತಿಹಾಸ ಪುರುಷರನ್ನು ತೆರೆಗೆ ತಂದು ಅನರ್ಘ್ಯ ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ.
“ಬೇಡುವ ನಾಲಿಗೆಯಲ್ಲಿ ನಿಯತ್ತಿದ್ದರೆ ಕೊಡುವ ಕೈಗಳಿಗೆ ಕೊರತೆಯಿಲ್ಲ” ಎಂಬ ದಾಸರ ವಾಣಿಯನ್ನು ಅಳವಡಿಸಿಕೊಂಡ ಶ್ರೀಗಳು, ಭಕ್ತರ ದೇಣಿಗೆಯನ್ನು ಶಿಸ್ತುಬದ್ಧವಾಗಿ ಬಳಸಿ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದಾರೆ.
“ಕೂಡಿ ಬಾಳೋಣ ಸೇರಿ ಸಾಗೋಣ” ಎಂಬ ಆಶಯದೊಂದಿಗೆ ಧಾರ್ಮಿಕ ಕ್ಷೇತ್ರದಲ್ಲಿನ ದಿಗ್ಗಜರನ್ನೆಲ್ಲಾ ಗುರುವಾಗಿಯೋ, ಗುರಿಯಾಗಿಯೋ ಅಥವಾ ಒಡನಾಡಿಗಳಾಗಿಯೋ ಸ್ವೀಕರಿಸಿ, ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೆಗಲು ನೀಡುತ್ತಾ ಆಧುನಿಕ ಅನುಭವ ಮಂಟಪವನ್ನು ಅನಾವರಣಗೊಳಿಸಿದ್ದಾರೆ.
ಎಲ್ಲಾ ಧರ್ಮದವರನ್ನು ಗೌರವಿಸುತ್ತಾ ಭಾವೈಕ್ಯತೆಯ ಬಂಧುವಾಗಿ ಮನುಜಮತವನ್ನು ಎತ್ತಿಹಿಡಿಯುತ್ತಿದ್ದಾರೆ. ಸಮುದಾಯದ ಅಸಂಘಟಿತ ನಾಯಕರಿಗೆ ದಿಟ್ಟತನದಿಂದ ಎಚ್ಚರಿಕೆ ನೀಡಿ ಜಾಗೃತಗೊಳಿಸುತ್ತಾ, ಸಮಾಜದ ರಾಜಕೀಯ ನಾಯಕರಿಗೆ ಆತ್ಮಸ್ಥೈರ್ಯದ “ರಾಜಗುರು” ಆಗಿದ್ದಾರೆ.
ಸದಾ ಕ್ರಿಯಾಶೀಲ ಶ್ರೀಗಳು ಕಾಗಿನೆಲೆ, ಹಿರೆಕೇರೂರು, ಶಿಕಾರಿಪುರ, ರಾಣೆಬೆನ್ನೂರು, ಬೆಂಗಳೂರು, ಹುಬ್ಬಳ್ಳಿ ಜಮೀನುಗಳು, ಬೆಳ್ಳೂಡಿಯಲ್ಲಿ “ಭಕ್ತರ ಭಕ್ತಿಯ ಕುಟೀರ”, ಮೈಲಾರದಲ್ಲಿ “ಏಳುಕೋಟಿ ಭಕ್ತರ ಭಕ್ತಿಯ ಕುಟೀರ”, ಬೆಂಗಳೂರಿನಲ್ಲಿ “ಭಕ್ತಿಯ ಭಂಡಾರ ಕುಟೀರ”, ವಿದ್ಯಾ ಕೇಂದ್ರಗಳು, ವಸತಿ ನಿಲಯಗಳು, ದೇವಸ್ಥಾನಗಳು, ಸಮುದಾಯ ಭವನಗಳು ನಿರ್ಮಾಣವಾಗಿ ಸಂಕಲ್ಪ ಸಾಧನೆಯ ಕೈಗನ್ನಡಿಯಾಗಿವೆ.
ಈ ರೀತಿ ಶಾಖಾ ಮಠಗಳಿಗೆ ಮಾದರಿಯಾಗುವ ಮೂಲಕ ನಿತ್ಯವೂ ದಣಿವರಿಯದ ಕಾಯಕಯೋಗಿಗಳಾಗಿ ಮೆರೆಯುತ್ತಿದ್ದಾರೆ.
ಜಗದ್ಗುರುಗಳ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸೇವೆಗಳನ್ನು ಪರಿಗಣಿಸಿದ ದಾವಣಗೆರೆ ವಿಶ್ವವಿದ್ಯಾಲಯವು 02-04-2025 ರಂದು ಆಯೋಜಿಸಿದ್ದ 12ನೇ ವರ್ಷದ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್ ಅವರು ಜಗದ್ಗುರುಗಳಿಗೆ “ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್)” ಗೌರವ ಪದವಿಯನ್ನು ಪ್ರಧಾನ ಮಾಡಿ ಅಭಿನಂದಿಸಿದ್ದು, ಶ್ರೀಗಳ ವಿದ್ವತ್ಪೂರ್ಣ ಕೈಂಕರ್ಯಗಳಿಗೆ ಹಿಡಿದ ಕನ್ನಡಿಯಾಗಿದೆ.
ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಇವರನ್ನು “ಕಥೆಗಳ ಕಣಜ” ಎಂದು ಶ್ಲಾಘಿಸಿದ್ದಾರೆ.
ಅಖಂಡ ಕರ್ನಾಟಕದ ಕುರುಬರಿಗೆ ಪರಿಶಿಷ್ಟ ಪಂಗಡ (ಎಸ್.ಟಿ.) ಮೀಸಲಾತಿಗಾಗಿ ಯಜ್ಞದೀಕ್ಷೆ ತೊಟ್ಟ ಶ್ರೀಗಳು, ದಿಟ್ಟ ಹೆಜ್ಜೆಗಳೊಂದಿಗೆ ಶ್ರೀಕ್ಷೇತ್ರ ಕಾಗಿನೆಲೆಯಿಂದ ರಾಜಧಾನಿ ಬೆಂಗಳೂರುವರೆಗೆ ಸುಮಾರು 340 ಕಿ.ಮೀ. ಐತಿಹಾಸಿಕ ಪಾದಯಾತ್ರೆ ಕೈಗೊಂಡರು. ದಾರಿ ಉದ್ದಕ್ಕೂ ಜನಜಾತ್ರೆಯಾಯಿತು. ಇತಿಹಾಸದಲ್ಲಿ ಕಂಡರಿಯದ, ಕೇಳರಿಯದ ಕಾರ್ಯಕ್ರಮವು ನಡೆಯಿತು. ಬೆಂಗಳೂರಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸುಮಾರು 10 ಲಕ್ಷ ಜನ ಸೇರಿ ಎಸ್.ಟಿ. ಮೀಸಲಾತಿಗಾಗಿ ರಣಕಹಳೆ ಮೊಳಗಿಸಿದ್ದು ಇತಿಹಾಸವೇ ಆಗಿದೆ. ಪ್ರಸ್ತುತ ಎಸ್.ಟಿ. ಮೀಸಲಾತಿ ವರದಿಯು ಕೇಂದ್ರ ಸರ್ಕಾರದ ಆರ್.ಜಿ.ಐ.ನಲ್ಲಿದ್ದು, ಶ್ರೀಗಳು ಮುತುವರ್ಜಿ ವಹಿಸುತ್ತಿದ್ದಾರೆ.
ಶತಶತಮಾನಗಳಿಂದ ವಿವಾದಕ್ಕೊಳಪಟ್ಟಿದ್ದ, ಶ್ರೀಕನಕ ಗೋಪುರ, ಶ್ರೀ ಕನಕನ ಕಿಂಡಿಯನ್ನು ಪಟ್ಟಭದ್ರ ಹಿತಾಸಕ್ತಿಗಳು “ನವಗ್ರಹ ಕಿಂಡಿ” ಎಂದು ಇತಿಹಾಸ ತಿರುಚುವ ಕೆಲಸಕ್ಕೆ ಕೈ ಹಾಕಿದಾಗ, ಜಗದ್ಗುರುಗಳು ಪ್ರಖರವಾಗಿ ಖಂಡಿಸಿದರು. ಪ್ರಥಮ ಬಾರಿಗೆ ಶ್ರೀಕೃಷ್ಣ-ಕನಕರ ಉಡುಪಿಯ ಪುರಪ್ರವೇಶ ಮಾಡುವ ಮೂಲಕ ವಿವಾದಕ್ಕೆ ಇತಿಶ್ರೀ ಹಾಡಿದರು.
ಶ್ರೀ ಕನಕಮಾಲೆಯನ್ನು ಧರಿಸುವುದು ಮೌಢ್ಯತೆಗಾಗಿ ಅಲ್ಲ – ಸಾಮೂಹಿಕ ಪ್ರಾರ್ಥನೆಯಲ್ಲಿ ಹೊಸ ಉತ್ಸಾಹ ಮೂಡುವುದರಿಂದ ಸಾಂಘಿಕ ಶಕ್ತಿ ಬೆಳೆಯುತ್ತದೆ. ನಮ್ಮ ಆಚಾರ-ವಿಚಾರಗಳಲ್ಲಿ ಮತ್ತೊಬ್ಬರಿಗೆ ನೋವಾಗದಂತೆ ಮಾಡುವ ಪ್ರತಿಯೊಂದು ವ್ರತಾಚರಣೆಗಳು ಮೌಢ್ಯಗಳಲ್ಲ; ಮನಸ್ಸಿನ ನೆಮ್ಮದಿಗೆ ಕಂಡುಕೊಂಡ ಮಾರ್ಗಗಳು. ಈ ಮೂಲಕ ಭಕ್ತರನ್ನು ಶ್ರೀಮಠದೊಂದಿಗೆ ಸಂಪರ್ಕ ಬೆಳೆಸುವುದೇ ಜಗದ್ಗುರುಗಳ ಧ್ಯೇಯೋದ್ದೇಶವಾಗಿದೆ.
ಅಖಂಡ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಜಗದ್ಗುರುಗಳ ಸಮಾಜ ಜಾಗೃತಿ ಅಭಿಯಾನವು ಕಾಲಿಟ್ಟಿದೆ. ಗೋವಾ, ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿ ಶ್ರೀ ಕನಕ ಜಯಂತೋತ್ಸವಗಳ ಮೂಲಕ ಅಲ್ಲಿಯ ಸಮಾಜ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ.
ವಿಧಾನಸೌಧದಲ್ಲಿ ಅಧಿಕಾರದ ಕಂಬಳಿ ಹರಡಲು ಸಂಕಲ್ಪ ಮಾಡಿದ ಜಗದ್ಗುರುಗಳು, 2012ರಲ್ಲಿ ದಾವಣಗೆರೆಯಲ್ಲಿ ನಡೆದ ಹಾಲುಮತ ಶತಮಾನೋತ್ಸವದಲ್ಲಿ “ಅಹಿಂದ ವರ್ಗದವರು ಒಗ್ಗೂಡಿದರೆ ಅಹಿಂದ ವರ್ಗದ ವ್ಯಕ್ತಿ ಮುಖ್ಯಮಂತ್ರಿ ಏಕೆ ಆಗುವುದಿಲ್ಲ?” ಎಂದು ಪ್ರಶ್ನಿಸಿ, ಇಂದಿನಿಂದ ಒಗ್ಗಟ್ಟನ್ನು ಕಾಯ್ದುಕೊಳ್ಳಿ ಎಂದು ಭವಿಷ್ಯ ನುಡಿದರು. ಅದಕ್ಕೆ ಪೂರಕವಾಗಿ ಚುನಾವಣಾಪೂರ್ವದಲ್ಲಿ ರಾಜ್ಯಾದ್ಯಂತ ಅಹಿಂದ ಸಮಾಜವನ್ನು ಜಾಗೃತಿಗೊಳಿಸಿ, ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲು ಜಗದ್ಗುರುಗಳ ಪ್ರಯತ್ನ ಮತ್ತು ಆಶೀರ್ವಾದ ಅನನ್ಯವಾದುದು.
ಜಗದ್ಗುರುಗಳು ಆಡಿದ ಮಾತಿನಂತೆ ವಿಧಾನಸೌಧದಲ್ಲಿ ಅಹಿಂದ ವರ್ಗದ ವ್ಯಕ್ತಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ.
“ಎಲ್ಲರಿಗಾಗಿ ಜಗದ್ಗುರುಗಳು, ಎಲ್ಲರೂ ಜಗದ್ಗುರುಗಳಿಗಾಗಿ” ಎಂಬಂತೆ ಗುರು-ಶಿಷ್ಯರ ಅವಿನಾಭಾವ ಸಂಬಂಧವು ದಿನದಿಂದ ದಿನಕ್ಕೆ ನೂರ್ಮಡಿಗೊಳ್ಳುತ್ತಿದೆ. ಇಂತಹ ವೈಶಿಷ್ಟಪೂರ್ಣ ಜಗದ್ಗುರುಗಳನ್ನು ಪಡೆದ ಸಮಾಜವು ಧನ್ಯತಾಭಾವವನ್ನು ಹೊಂದಿದೆ.