ದಣಿವರಿಯದ ಕಾಯಕಯೋಗಿ – ಡಾ. ನಿರಂಜನಾನಂದಪುರಿ ಮಹಾಸ್ವಾಮಿಜಿ
ಜನನ: 10 ಏಪ್ರಿಲ್ 1977 | ಪೀಠಾರೋಹಣ: 29 ಅಕ್ಟೋಬರ್ 2006
ಆದಿಜಗಕ್ಕೆಲ್ಲ ಮೊದಲು ಹುಟ್ಟಿದ ಕುರುಬ ಕುಲದ ಕುಲ ಗುರುಗಳಾದ ಮತ್ತು ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ಪರಮ ಆರಾಧಕರಾಗಿದ್ದ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯ ಶ್ರೀ ಗುರುಸಿದ್ದಯ್ಯ ಒಡೆಯರ್ ಮತ್ತು ಶ್ರೀಮತಿ ರುದ್ರಾಯಣಮ್ಮ ದಂಪತಿಯ ಪವಿತ್ರ ಉದರದಲ್ಲಿ ನಾಲ್ಕನೆಯ ಮಗುವಾಗಿ ಶ್ರೀ ರೇವಣಸಿದ್ದೇಶ್ವರರ ಕಾರುಣ್ಯದಿಂದ 10 ಏಪ್ರಿಲ್ 1977ರ “ಶಿವ”ಯೋಗದಲ್ಲಿ ಶ್ರೀವಿಕ್ರಮ ಸಂವತ್ಸರದ ಹೊಸ ವಸಂತದಲ್ಲಿ ಅವತರಿಸಿ ಜನ್ಮತಾಳಿದವರು ಜಗದ್ಗುರು ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು.
ಹಾಲುಮತ ಸಮಾಜದ ಧರ್ಮಗುರುಗಳಾಗಿದ್ದ ಪೋಷಕರ ಸಚ್ಚಾರಿತ್ರ್ಯ, ಸದಾಚಾರ, ಸಂಸ್ಕಾರ, ಸದ್ಗುಣ, ನಿಷ್ಕಾಮ ಕರ್ಮಗಳು ಬಾಲ್ಯದಲ್ಲಿಯೇ ಶ್ರೀಗಳ ಮೇಲೆ ಪ್ರಭಾವ ಬೀರಿ, ಅಪ್ಪಟ ದೈವ ಭಕ್ತರನ್ನಾಗಿಸಲು ಪೂರ್ವಾಶ್ರಮದ ಪರಿಸರವೇ ಪ್ರೇರಣೆಯಾಯಿತು.
ಗುರುಮನೆತನದ ಸಂಸ್ಕಾರಕ್ಕೆ ಬಾಲ್ಯದಲ್ಲಿ ನಡೆದ ಒಂದು ಘಟನೆಯನ್ನು ಶ್ರೀಗಳು ನೆನಪಿಸಿಕೊಳ್ಳುತ್ತಿರುತ್ತಾರೆ. ಬಾಲ್ಯದಲ್ಲಿ ಅರಿಯದೇ ಗ್ರಾಮದಲ್ಲಿ ನಿರಂಜನ ಒಡೆಯರ್ (ಶ್ರೀಗಳ ಪೂರ್ವಾಶ್ರಮದ ಹೆಸರು) ಸ್ನೇಹಿತರೊಂದಿಗೆ ತಿಥಿಯೂಟ ಮಾಡಿರುವುದು ಇವರ ತಂದೆಗೆ ತಿಳಿದು, ಅವರ ಕೋಪಕ್ಕೆ ಗುರಿಯಾಗಿ, ಒಂದು ದಿನದ ಮಟ್ಟಿಗೆ ಮನೆಯಿಂದ ಹೊರ ಹಾಕಿ, ಶ್ರೀರೇವಣಸಿದ್ದೇಶ್ವರ ದೇವಾಲಯಕ್ಕೆ ಕರೆದುಕೊಂಡು ಹೋಗಿ ತೀರ್ಥವನ್ನು ಪ್ರೋಕ್ಷಣೆ ಮಾಡಿ ಶುದ್ಧಿಕರಿಸಿದ್ದನ್ನು ಶ್ರೀಗಳು ಸ್ಮರಿಸಿಕೊಳ್ಳುತ್ತಾರೆ.
(ಸಾಂಪ್ರಾದಾಯಕವಾಗಿ ಸೂತಕದ ಮನೆಗಳಿಂದ ಒಣಪಡಿಗಳನ್ನು (ಉಲುಪಿ) ತೆಗೆದುಕೊಳ್ಳುವ ಪದ್ಧತಿ ಇತ್ತು) ಅಷ್ಟೇನೂ ಸ್ಥಿತಿವಂತರಲ್ಲದ ಗುರು ಮನೆತನ ಇವರದಾಗಿದ್ದು, ಭಕ್ತರು ಕೊಡುವ ಕಾಣಿಕೆಗಳಿಂದ ಜೀವನ ಸಾಗಿಸುತ್ತಿದ್ದ ಸಂದರ್ಭಗಳಲ್ಲಿ ತುಂಬು ಕುಟುಂಬ ಕೆಲವೊಮ್ಮೆ ಮಂಡಕ್ಕಿಯೇ ಊಟವಾಗಿದ್ದ ಸಂದರ್ಭಗಳನ್ನು ಮೆಲುಕು ಹಾಕುತ್ತಿರುತ್ತಾರೆ. ಇಂತಹ ಕಷ್ಟ ಕಾರ್ಪಣ್ಯಗಳನ್ನು ಬಾಲ್ಯದಿಂದಲೇ ಅನುಭವಿಸಿದ್ದ ಶ್ರೀಗಳು ಶಿಕ್ಷಣದಿಂದ ದೂರ ಉಳಿಯಲಿಲ್ಲ.
ಶ್ರೀಗಳು ತಮ್ಮ ಪ್ರಾಥಮಿಕ ಶಿಕ್ಷಣ (1ರಿಂದ 7ನೇ ತರಗತಿ)ವನ್ನು ಹರ್ತಿಕೋಟೆಯಲ್ಲಿ ಪೂರೈಸಿದರು. ಶಿಕ್ಷಣದ ಸಲಕರಣೆ, ಬಟ್ಟೆಯನ್ನು ತೆಗೆದುಕೊಳ್ಳಲು ಬಾಲ್ಯದಲ್ಲಿಯೇ ಬಳ್ಳಾರಿ ಜಾಲಿ (ಪೀಕ ಜಾಲಿ) ಕಡಿದು ಅದನ್ನು ತುಂಡರಿಸಿ, ಊರಲ್ಲಿ ಮಾರಾಟ ಮಾಡಿ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ಸರಿದೂಗಿಸಿಕೊಳ್ಳುತ್ತಿದ್ದ ಕಷ್ಟದ ದಿನಗಳನ್ನು ಶ್ರೀಗಳು ಅನುಭವಿಸಿರುತ್ತಾರೆ. ಈ ಮಧ್ಯೆ ದಾವಣಗೆರೆಯ ಹಿರಿಯ ರಾಜಕಾರಣಿಯಾದ ಶ್ರೀ ಕೆ. ಮಲ್ಲಪ್ಪನವರ ಮತ್ತು ಶ್ರೀಗಳ ತಂದೆಯವರ ಭಾವನಾತ್ಮಕ ಒಡನಾಟದಿಂದ ಆಗ ತಾನೇ ಸ್ಥಾಪನೆಯಾಗುತ್ತಿದ್ದ ಶ್ರೀಕಾಗಿನೆಲೆ ಕನಕ ಗುರುಪೀಠಕ್ಕೆ ನಿರಂಜನ ಒಡೆಯರ್ನ್ನು ಮೊದಲನೆಯ ವಟುವಾಗಿ “ದತ್ತು” ನೀಡಲು ತೀರ್ಮಾನಿಸಿದರು.
ಕುರುಬರ ಶಕ್ತಿಯಾಗಿ, ಶ್ರೀಭಕ್ತ ಕನಕದಾಸರ ಅನುಪಾಲಕರಾಗಿ, ಕುಲಗುರು ಶ್ರೀ ರೇವಣಸಿದ್ದೇಶ್ವರರ ಆಶೀರ್ವಾದದಿಂದ ಹಿಂದುಳಿದ ಸಮಾಜದ ಜಾಗೃತಿ ಮತ್ತು ಸಂಘಟನೆಗಾಗಿ ಬಾಲ್ಯದಲ್ಲಿಯೇ ತಮ್ಮನ್ನು ತಾನು ಅರ್ಪಿಸಿಕೊಳ್ಳಲು ಶ್ರೀಗಳು ಸಂತೋಷದಿಂದ ಮೌನವಾಗಿ ಒಪ್ಪಿಗೆ ಸೂಚಿಸಿದರು.
1991 ರಲ್ಲಿ ವಾಗ್ಧಾನ ಮಾಡಿದಂತೆ ಶ್ರೀಗಳ ತಂದೆಯವರು ಶ್ರೀಗಳೊಂದಿಗೆ 1992, ಜನವರಿ 4 ರಂದು ಬೆಂಗಳೂರಿನಲ್ಲಿ ನಡೆದ ಹರ – ಗುರು – ಚರಮೂರ್ತಿಗಳ ಧರ್ಮಸಭೆಯಲ್ಲಿ ಕುರುಬ ಸಮಾಜದ ಪೀಠಕ್ಕೆ ಮೊದಲ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕನಂದಪುರಿ ಮಹಾಸ್ವಾಮಿಗಳು ನಿರಂಜನ ಒಡೆಯರ್ನ್ನು ದತ್ತಕ್ಕೆ ಪಡೆದು ಬೆಂಗಳೂರಿನ ಕೈಲಾಸಾಶ್ರಮಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳುಹಿಸಲಾಯಿತು.
ಉಜ್ಜಲ ತಪಸ್ವಿಗಳು, ಬ್ರಹ್ಮ ಜ್ಞಾನಿಗಳಾದ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ವರಪುತ್ರರಾದ ಶ್ರೀಶ್ರೀಶ್ರೀ ತಿರುಚ್ಚಿ ಮಹಾಸ್ವಾಮಿಗಳ ಪರಮ ಅಚ್ಚುಮೆಚ್ಚಿನ ಶಿಷ್ಯರಲ್ಲೊಬ್ಬರಾಗಿ ಆಧ್ಯಾತ್ಮಿಕ ಜ್ಞಾನಧಾರೆಯನ್ನು ಪಡೆದರು. ಕಡು ಬಡತನದ ಕರಿನೆರಳನಲ್ಲಿ ಜೀವಿಸಿದ್ದರಿಂದ ಆಶ್ರಮದ ಎಲ್ಲಾ ಕಟ್ಟುಪಾಡುಗಳು, ನೀತಿ ನಿಯಮಗಳಿಗೆ ಹೊಂದಿಕೊಂಡು ಮೂರು ವರ್ಷಗಳ ಕಾಲ ಪ್ರೌಢಶಾಲೆಯ ಶಿಕ್ಷಣವನ್ನು ಎಂತಹ ಶುಭ ಸಮಾರಂಭವಿದ್ದರೂ ಪೂರ್ವಾಶ್ರಮಕ್ಕೆ ಹೋಗದೇ ಶಿಕ್ಷಣವನ್ನು ಪೂರೈಸಿದರು.
ಪ್ರೌಢಶಿಕ್ಷಣದ ನಂತರ ಪೂರ್ವಪರ ಯಾವುದೇ ಪರಿಚಯವಿಲ್ಲದ ಹರಿದ್ವಾರಕ್ಕೆ ಸಂಸ್ಕೃತ ಅಧ್ಯಯನಕ್ಕಾಗಿ ಹೊರಡಬೇಕಾಯಿತು. ಅಲ್ಲಿ ಸೂಕ್ತ ವಸತಿ ಸೌಕರ್ಯವಿಲ್ಲದೇ ತಂಗುದಾಣಗಳಲ್ಲಿ, ದೇವಾಲಯಗಳಲ್ಲಿ ಆಶ್ರಮಗಳಲ್ಲಿ ಕಷ್ಟ ದಿನಗಳನ್ನು ಕಳೆಯುತ್ತಾ ಸಾಧುಸಂತರ, ಅಘೋರಿಗಳ ಒಟ್ಟಿಗಿದ್ದು, ಆಧ್ಯಾತ್ಮಿಕ ಹಸಿವು ನೀಗಿಸಿಕೊಳ್ಳುತ್ತಾ ವಿವಿಧ ಜ್ಞಾನ ಕ್ಷೇತ್ರಗಳ ತಲ ಸ್ಪರ್ಶಿ ಅರಿವು ಹೊಂದುತ್ತಾ ಕಾಲಬದ್ಧ ಶಿಸ್ತನ್ನು ಮೈಗೂಡಿಸಿಕೊಂಡು ಬಹುಶ್ರುತ ಪಾಂಡಿತ್ಯವನ್ನು ಪಡೆದರು. ಹರಿದ್ವಾರದಿಂದಲೇ ಜಗದ್ಗುರುಗಳಿಗೆ ಶ್ರೀಗಳು ತಮ್ಮ ಶಿಕ್ಷಣ ಹಾಗೂ ಕುಶಲೋಪರಿಯನ್ನು ಪತ್ರಗಳ ಮೂಲಕ ಹಂಚಿಕೊಳ್ಳುತ್ತಿದ್ದರು.
“ದೇಶ ಸುತ್ತು ಇಲ್ಲ ಕೋಶ ಓದು” ಎಂಬ ಗಾದೆಯಂತೆ, ಶ್ರೀಗಳು ಬದ್ರಿ, ಕೇದಾರ, ಗಂಗೋತ್ರಿ, ಯಮನೋತ್ರಿ, ಕುರುಕ್ಷೇತ್ರ, ಕಾಶಿ, ಮಧುರಾ, ಬೃಂದಾವನ, ಜಮ್ಮುವಿನ ವೈಷ್ಣವಿ ದೇವಸ್ಥಾನಗಳಲ್ಲಿ ತಿಂಗಳುಗಳ ಕಾಲ ತಂಗಿದ್ದು, ನಿಷ್ಕಾಮ ಕರ್ಮಗಳನ್ನು ಮಾಡುತ್ತಾ, ಆಧ್ಯಾತ್ಮಿಕ ಬದುಕನ್ನು ಗಟ್ಟಿಗೊಳಿಸಿಕೊಂಡರು. ಶ್ರೀಗಳು ಸಂಸ್ಕೃತ, ಹಿಂದಿ, ಕನ್ನಡ, ತಮಿಳು, ತೆಲುಗು, ನೇಪಾಳಿ ಭಾಷೆಗಳನ್ನು ಕಲಿತು ವೇದ, ಆಗಮನ, ಶಾಸ್ತ್ರ ಅಧ್ಯಯನ ಮಾಡಿ ಜ್ಞಾನ ಸಂಪತ್ತನ್ನು ಹೊಂದಿದರು.
“ತೇನವಿನ ತೃಣಮಪಿ ನಾ ಚಲತಿ – ದೇವರ ಅನುಗ್ರಹವಿಲ್ಲದೇ ಒಂದು ಹಲ್ಲುಕಡ್ಡಿಯು ಅಲುಗಾಡದು” ಎಂಬಮಾತಿನಂತೆ, ಹರಿದ್ವಾರದಲ್ಲಿಯೇ ನೆಲೆಗೊಳ್ಳಬೇಕೆಂಬುದು ಶ್ರೀಗಳ ಸಂಕಲ್ಪವಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಶ್ರೀಗಳಿಗೆ ಕಾಡಿದ ಅತಿಯಾದ ಉದರ ಬಾಧೆಯಿಂದ 2000ನೇ ಇಸ್ವಿಯಲ್ಲಿ ತಾಯ್ನಾಡಿಗೆ ಮರಳುವ ಅನಿವಾರ್ಯತೆ ಬಂದಿತು.
2001 ಮಾರ್ಚ್ 3 ರಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಮೊದಲ ಜಗದ್ಗುರುಗಳಾದ ಶ್ರೀಶ್ರೀಶ್ರೀ ಬೀರೇಂದ್ರ ಕೇಶವ ತಾರಕಾನಂದ ಪುರಿ ಮಹಾಸ್ವಾಮಿಗಳಿಂದ ಸನ್ಯಾಸ ದೀಕ್ಷೆ ಪಡೆದು ಶ್ರೀಮಠದ ಕಿರಿಯ ಸ್ವಾಮಿಜಿಗಳಾಗಿ ಕುರುಬ ಸಮಾಜದ ಉದ್ದಾರಕ್ಕಾಗಿ ಕಂಕಣಬದ್ಧರಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು.
ಪ್ರಥಮ ಜಗದ್ಗುರುಗಳ ಅಚ್ಚು ಮೆಚ್ಚಿನ ಶಿಷ್ಯರಾಗಿದ್ದ ಶ್ರೀಗಳು, ಜಗದ್ಗುರುಗಳು ಕೈಗೊಳ್ಳುವ ಸಮಾಜಮುಖಿ ಕೈಂಕರ್ಯಗಳಿಗೆ ಹೆಗಲುಕೊಟ್ಟು ನಿಂತರು. ಶ್ರೀಮಠವು 2002 ರಲ್ಲಿ ದಶಮಾನೋತ್ಸವ ಆಚರಿಸಿತು. ಈ ಸಂದರ್ಭದಲ್ಲಿ ಶ್ರೀಗಳು ಜಗದ್ಗುರುಗಳು ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಪ್ರಥಮ ಜಗದ್ಗುರುಗಳು ವಯೋವೃದ್ಧ ಕಾಯಿಲೆಗಳಿಗೆ ಒಳಗಾಗುತ್ತಿದ್ದರಿಂದ ಅವರ ಇಚ್ಛೆಯಿಂದ ಕರ್ನಾಟಕ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಕನಕ ಗುರುಪೀಠದ ಶಾಖಾಮಠಗಳನ್ನು ಸ್ಥಾಪಿಸಲು ನಿರ್ಣಯಿಸಿ, ಆ ಮಠಗಳಿಗೆ ನಾಲ್ಕು ಶ್ರೀಗಳನ್ನು ನೇಮಿಸಿದರು.
ಅದರಂತೆ ಬೆಳಗಾವಿ ವಿಭಾಗ 14-05-2002 ಬೆಳಗಾವಿ ವಿಭಾಗಕ್ಕೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮಿಜಿಯವರನ್ನು ನಿಯೋಜಿಸಲಾಯಿತು.
ಸಕಲ ಭಕ್ತರ ನೆರವಿನೊಂದಿಗೆ ಪ್ರಥಮ ಜಗದ್ಗುರುಗಳಿಗೆ “ಪ್ರಥಮ ತುಲಾಭಾರ”ವನ್ನು ಶ್ರೀಗಳ ನೇತೃತ್ವದಲ್ಲಿ ನಡೆಸಲಾಯಿತು.
ಬೆಳಗಾವಿ ವಿಭಾಗದ ಜವಾಬ್ದಾರಿ ಹೊತ್ತ ಪೂಜ್ಯರು ಜಗದ್ಗುರುಗಳ ಸೇವೆ ಮಾಡುತ್ತಾ ಗ್ರಾಮೀಣ ಪ್ರದೇಶದ ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡಿ, ಸಮಾಜ ಸಂಘಟನೆಯನ್ನು ಮಾಡುತ್ತಾ ಭಕ್ತರಿಂದ ಜೋಳಿಗೆಯ ಭಿಕ್ಷೆಯ ಮೂಲಕ ಕಾಗಿನೆಲೆಯಲ್ಲಿ ನೂತನ ಮಠ ನಿರ್ಮಿಸಿದರು. ಶ್ರೀಕನಕ – ಕೇಶವ ರಥೋತ್ಸವ, ಹಾಲುಮತ ಇತಿಹಾಸ ಪುರುಷರ ಪ್ರವಚನಗಳು, ಜಾನಪದ ಕಲಾವೈಭವ ಸ್ಪರ್ಧೆಗಳನ್ನು ಏರ್ಪಡಿಸಿ, ಶ್ರೀಕನಕ ಗುರುಪೀಠದ ಅಭಿವೃದ್ಧಿಗೆ ಚಾಲನೆ ನೀಡಿದರು.
ಜಗದ್ಗುರುಗಳು ಅನಾರೋಗ್ಯದ ನಿಮಿತ್ತ ದಿನಾಂಕ 06-07-2006 ರಂದು ಬೆಂಗಳೂರಿನ ಶ್ರೀಕನಕ ಗುರುಪೀಠದ ಶಾಖಾಮಠದಲ್ಲಿ ಬ್ರಹ್ಮಲೀನರಾದರು. ಜಗದ್ಗುರುಗಳ ಪಾರ್ಥಿವ ಶರೀರವನ್ನು ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಆವರಣದಲ್ಲಿ ಶಾಖಾ ಮಠಾಧೀಶರುಗಳ ನೇತೃತ್ವದಲ್ಲಿ ಅಂತ್ಯ ಸಂಸ್ಕಾರವನ್ನು ಕೈಗೊಂಡು, ನಾಡಿನ ಹಿರಿಯರು, ಪಕ್ಷಾತೀತವಾಗಿ ರಾಜಕಾರಣಿಗಳು ಸಾಹಿತಿಗಳು, ಯುವಕರು, ಗ್ರಾಮಸ್ಥರು ಸೇರಿದಂತೆ ಕುರುಬ ಸಮಾಜದ ಭಕ್ತರು ಕಾಗಿನೆಲೆಗೆ ಆಗಮಿಸಿ ಇಡೀ ಭಕ್ತ ಸಮೂಹ ಕಂಬನಿಯನ್ನು ಮಿಡಿಯಿತು. ಪೂಜ್ಯರಿಗೆ ಅಶ್ರುತರ್ಪಣ ಅರ್ಪಿಸಿದರು.
ದಿನಾಂಕ 21-7-2006 ರಂದು ಶ್ರೀಕನಕ ಗುರುಪೀಠದ ಕಿರಿಯ ಸ್ವಾಮಿಜಿಗಳ ಸಾನಿಧ್ಯದಲ್ಲಿ ಬ್ರಹ್ಮಲೀನರಾದ ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕನಂದಪುರಿ ಮಹಾಸ್ವಾಮಿಗಳಿಗೆ ಭಕ್ತಿಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಪ್ರತಿವರ್ಷವೂ ಗುರುಪೂರ್ಣಿಮದ ದಿನದಂದು ಬ್ರಹ್ಮಲೀನ ಪ್ರಥಮ ಜಗದ್ಗುರುಗಳಿಗೆ ಪುಣ್ಯಾರಾಧನೆ ಮಾಡಲಾಗುತ್ತಿದೆ.
ಪ್ರಥಮ ಜಗದ್ಗುರುಗಳ ಆಶಯದಂತೆ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶ್ರೀಕ್ಷೇತ್ರ ಕಾಗಿನೆಲೆಯ ದ್ವಿತೀಯ ಜಗದ್ಗುರುಗಳಾಗಿ ಶ್ರೀಮಠದ ಕಿರಿಯ ಸ್ವಾಮಿಜಿಗಳಾದ ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳನ್ನು ಒಕ್ಕೊರಲಿನಿಂದ ಶ್ರೀಕನಕ ಗುರುಪೀಠ ಟ್ರಸ್ಟ್ ಪೀಠಾಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ದಿನಾಂಕ 29-10-2006ನೇ ಭಾನುವಾರದಂದು ಶ್ರೀ ಕ್ಷೇತ್ರ ಕಾಗಿನೆಲೆಯಲ್ಲಿ ನಾಡಿನ ಸಾಧು ಸಂತರು ಹರ-ಚರಮೂರ್ತಿಗಳು, ಸಮಾಜದ ಮುಖಂಡರು ಪಾಲ್ಗೊಂಡು ಐತಿಹಾಸಿಕ ಕಾರ್ಯಕ್ರಮದಲ್ಲಿ ನೂತನ ಜಗದ್ಗುರುಗಳಿಗೆ ಪೀಠಾರೋಹಣ ಮಾಡಿ ಶುಭ ಕೋರಿದರು.
ನೂತನ ಜಗದ್ಗುರುಗಳು ಕುಲಗುರು ಶ್ರೀ ರೇವಣಸಿದ್ದೇಶ್ವರ, ಕುಲದೈವ ಶ್ರೀ ಬೀರಲಿಂಗೇಶ್ವರ ಹಾಗೂ ದಾಸ ಶ್ರೇಷ್ಟ ಭಕ್ತ ಕನಕದಾಸರ ಪೂರ್ಣಾನುಗ್ರಹವನ್ನು ಪಡೆದು ಸಮಾಜದಲ್ಲಿ ಪ್ರೀತ್ಯಾಧಾರಗಳನ್ನು ಗಳಿಸುತ್ತಾ ಭಕ್ತರಿಗೆ ದಾರಿದೀಪವಾಗಿದ್ದಾರೆ.
ನವಚೈತನ್ಯದ, ಮಾತೃಹೃದಯಿ, ಕ್ರಿಯಾಶೀಲ ವ್ಯಕ್ತಿತ್ವದ, ಕಾಯಕ ತಪಸ್ವಿಗಳಾದ ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮಿಜೀಯವರನ್ನು ಎರಡನೇ ಜಗದ್ಗುರುಗಳನ್ನಾಗಿ ಹಾಲುಮತ ಸಮಾಜವು ಸ್ವೀಕರಿಸಿ ಪೀಠಾರೋಹಣ ಮಾಡುವ ಅಮೃತ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಜನಸಾಗರವು ಶ್ರೀಕ್ಷೇತ್ರ ಕಾಗಿನೆಲೆಗೆ ಹರಿದು ಬಂದು ಜನಜಾತ್ರೆಯಾಗಿ ಮಾರ್ಪಟ್ಟಿತ್ತು. ಹೊಸ ಜಗದ್ಗುರುವಿನಿಂದ ಭಕ್ತ ಸಮೂಹ ಸಮಾಜದ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಧನ್ಯತಾ ಭಾವ ತಳೆಯಿತು.
ಶ್ರೀ ಭಕ್ತ ಕನಕದಾಸರ ಕರ್ಮಭೂಮಿಯಾಗಿದ್ದ ಕಾಗಿನೆಲೆಯಲ್ಲಿ ಶ್ರೀಕೇಶವ ದೇವಾಲಯದಲ್ಲಿ ತಾತ್ಸಾರಕ್ಕೊಳಪಟ್ಟ ಶ್ರೀ ಭಕ್ತಕನಕದಾಸರ ಮೂರ್ತಿಯನ್ನು ಕಂಡು ಜಗದ್ಗುರುಗಳು “ಅಯ್ಯೋ ಕನಕದೇವನೇ” 16 ನೇ ಶತಮಾನದಲ್ಲಿಯೂ ನಿನ್ನನ್ನು ದೇವಾಲಯದಿಂದ ಹೊರ ಹಾಕಿದ್ದರು. ಈಗಲೂ ಸಹ ನಿನ್ನ ಮೂರ್ತಿಯನ್ನು ಹೊರ ಹಾಕಿರುವುದನ್ನು ಸಹಿಸಲಾಗದು ಎಂದು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ, ದೇವಾಲಯ ನಿರ್ಮಿಸಿ, ಕನಕದಾಸರಿಗೂ ಪೂಜೆ ಸಲ್ಲುವಂತೆ ಮಾಡಿದ ಜಗದ್ಗುರುಗಳು.
ಕುರಿ ಸಾಕಾಣಿಕೆಯು ಕುರುಬರ ಕುಲ ಕಸುಬಾಗಿದ್ದು, ಜಗದ್ಗುರುಗಳು ಕುರಿಗಾಹಿಗಳ ಜೊತೆ ವಾಸ್ತವ್ಯ ಹೂಡಿ, ಕುರಿ ಗಾಹಿಗಳ ಸಮಸ್ಯೆಗಳ ಪ್ರತ್ಯಕ್ಷ ಅನುಭವ ಪಡೆದು ಆಲಿಸಿ, ಆಡಳಿತ ಸರ್ಕಾರಗಳಿಗೆ ಮನದಟ್ಟು ಮಾಡಿಸಿ, ಸವಲತ್ತುಗಳನ್ನು ಒದಗಿಸಿಕೊಡುತ್ತಿದ್ದಾರೆ. ಇದೇಸಂದರ್ಭದಲ್ಲಿ ಕುರಿಗಾಹಿಗಳು ಜಗದ್ಗುರುಗಳಿಗೆ ಕುರಿ ಭಿಕ್ಷೆಯನ್ನು ಸಹ ನೀಡುತ್ತಿರುತ್ತಾರೆ. ಪ್ರಸ್ತುತ ಶ್ರೀಮಠದ 1000 ಕುರಿಗಳಿದ್ದು, ಜಗದ್ಗುರು ಅದರ ಒಡೆಯರಾಗಿದ್ದು, ಶ್ರೀಮಠಕ್ಕೆ ಆದಾಯದ ಮೂಲವಾಗಿದ್ದು ಕೆಲ ಕುಟುಂಬಕ್ಕೆ ಕುರಿ ಹಿಂಡುಗಳ ನಿರ್ವಹಣೆ ಜವಾಬ್ದಾರಿ ನೀಡಿ ಜೀವನಾಧಾರಕ್ಕೆ ಶ್ರೀಗಳು ಕಾರಣರಾಗಿದ್ದಾರೆ.
“ಭಕ್ತರ ಅನನ್ಯ ಭಕ್ತಿ – ಶ್ರೀಮಠದ ಅಕ್ಷಯ ಶಕ್ತಿ” ಎಂದು ಕ್ರಿಯಾಶೀಲರಾಗಿ ರಾಜ್ಯದ ಕುರುಬಸಮಾಜದ ಜಾಗೃತಿ ಮತ್ತು ಸಂಘಟನೆಗಾಗಿ ಶ್ರೀಕನಕ ಒಡ್ಡೋಲಗ ಮತ್ತು ಶ್ರೀ ಕನಕ ಜಯಂತೋತ್ಸವದ ಮೂಲಕ ಭಕ್ತರನ್ನು ಮಠದ ಅಂಗಳಕ್ಕೆ ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಜಗದ್ಗುರುಗಳು “ನಮ್ಮ ಜಯಂತಿಗಳು ಬೇರೆ ಸಮುದಾಯಕ್ಕೆ ನೋವು ಆಗದಂತಿರಬೇಕು. ಸೌಹಾರ್ದ ಆಚರಣೆಗಳಾಗಬೇಕು” ಎಂದು ಭಕ್ತರಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುತ್ತಿದ್ದಾರೆ.
2006 ರಲ್ಲಿ ಪೀಠಾರೋಹಣದ ಸಂದರ್ಭದಲ್ಲಿ ಭಕ್ತರ ಅತಿಯಾದ ಒತ್ತಾಯದ ಮೇರೆಗೆ ಮಾನವನ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾಗಿದ್ದು ತದನಂತರ, ಈ ಉತ್ಸವವು ಮಾನವನ ಮೇಲೆ ನಡೆಯುವ ಅನಿಷ್ಟ ಪದ್ಧತಿ ಇದಾಗಿದ್ದು ಎಂಬುದನ್ನು ಭಕ್ತಸಮೂಹಕ್ಕೆ ತಿಳಿಹೇಳಿ ಆ ಕ್ಷಣದಿಂದಲೇ ಮಾನವನ ಅಡ್ಡ ಪಲ್ಲಕ್ಕಿ ಉತ್ಸವವನ್ನು ವಿರೋಧಿಸಿ, ಅಂತಹ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದ್ದಾರೆ ಹಾಗೂ ಎಂಜಲೆಲೆಯ ಮೇಲೆ ಉರುಳುವ ಮಡೇಸ್ನಾನ ಆಚರಣೆಯನ್ನು ಸಹ ತೀವ್ರವಾಗಿ ಖಂಡಿಸುತ್ತಾರೆ.
“ದೇವರ ತಲೆಯ ಮೇಲೆ ಪಾದ ಪೂಜೆಯು, ಮಲ ಹೊರುವ ಪದ್ಧತಿಗಿಂತ ಹೀನಾಯ ಆಚರಣೆಯೆಂದು” ಉಲ್ಲೇಖಿಸಿ, ಆ ಸಂಪ್ರದಾಯ ಅಸಂಬದ್ಧವೆಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಕುರುಬ ಸಮಾಜದಲ್ಲಿ ದೈವಗಳ ಬಗ್ಗೆ ಇದ್ದ ಅಸಮಾನತೆ ಮತ್ತು ಅಂಧತ್ವವನ್ನು ಹೋಗಲಾಡಿಸಲು ಶ್ರೀ ವಿಘ್ನೇಶ್ವರ, ಕುಲಗುರು ಶ್ರೀ ರೇವಣಸಿದ್ದೇಶ್ವರ, ಕುಲದೈವ ಶ್ರೀ ಬೀರಲಿಂಗೇಶ್ವರ, ಮುನಿದೇವ ಶ್ರೀ ಮೈಲಾರಲಿಂಗೇಶ್ವರ, ಶ್ರೀ ಆಂಜನೇಯಸ್ವಾಮಿ ಎಲ್ಲಾ ದೇವರುಗಳನ್ನು ಒಂದೇ ದೇವಾಲಯದಲ್ಲಿ ಪ್ರತಿಷ್ಟಾಪಿಸಿ ಭಕ್ತ ಜನರಲ್ಲಿದ್ದ ಅಂಧತ್ವವನ್ನು ಹೋಗಲಾಡಿಸಿ ಜಾಗೃತಿ ಮೂಡಿಸಿದ್ದಾರೆ.
ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ಶ್ರೀಕನಕ ಗುರುಪೀಠ ಪ್ರಾಥಮಿಕ, ಪ್ರೌಢಶಾಲೆ ಮತ್ತು ಶ್ರೀ ಹಕ್ಕಬುಕ್ಕ ಪದವಿ ಪೂರ್ವ ಕಾಲೇಜು, ಡಿ.ಇ.ಡಿ. ಕಾಲೇಜು, ಶ್ರೀ ರೇವಣಸಿದ್ದೇಶ್ವರ ಸಂಸ್ಕೃತ ಪಾಠಶಾಲೆ, ಶ್ರೀ ಮಾಳಿಂಗರಾಯ ವಸತಿ ನಿಲಯ, ಶಿಕಾರಿಪುರ ಸಂಚಾರಿ ಕುರಿಗಾಹಿಗಳ ವಸತಿ ಶಾಲೆ, ಹಿರೇಕೆರೂರಿನಲ್ಲಿ ಶ್ರೀಕನಕ ಗುರುಪೀಠ ಪದವಿಪೂರ್ವ ಕಾಲೇಜುಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನ – ವಸತಿ – ಅನ್ನ ನೀಡಿ ಜಗದ್ಗುರುಗಳು ತ್ರಿವಿಧ ದಾಸೋಹಿಗಳಾಗಿದ್ದಾರೆ.
ಪ್ರತಿ ವರ್ಷ ಶ್ರೀ ಕನಕ ಜಯಂತೋತ್ಸವದಂದು ಶ್ರೀ ಕನಕ – ಕೇಶವ ರಥೋತ್ಸವ ಹಾಲುಮತ ಇತಿಹಾಸ ಪುರುಷರ ಪುರಾಣ ಪ್ರವಚನಗಳು, ಶ್ರೀ ರೇವಣಸಿದ್ದೇಶ್ವರ, ಶ್ರೀ ಬೀರೇಶ್ವರಲಿಂಗೇಶ್ವರ ಶ್ರೀ ಮೈಲಾರಲಿಂಗೇಶ್ವರ, ಶ್ರೀ ಮಹಾಸಿದ್ದೇಶ್ವರಿ ದೇವರುಗಳಿಗೆ ವಾರ್ಷಿಕೋತ್ಸವ ಕಾರ್ಯಕ್ರಮಗಳು ಕುರುಬರ ಧಾರ್ಮಿಕ ಸಾಂಸ್ಕೃತಿಕ ಸಂಕೇತಗಳಾದ ಡೊಳ್ಳು, ಭಂಡಾರ, ವಿಭೂತಿ, ಜೋಳಿಗೆ, ಬೆತ್ತ, ಕಂಬಳಿ ಮುಂತಾದುವುಗಳ ಬಗ್ಗೆ ಭಕ್ತರಿಗೆ ಅವುಗಳ ದೈವೀ ಮಹತ್ವವನ್ನು ತಿಳಿಸುವ ಕಾಯಕವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
“ಕೂಡಿ ಬಾಳೋಣ ಸೇರಿ ಸಾಗೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ದಿನಾಂಕ 10-02-2012 ರಂದು ಹಿಂದುಳಿದ, ದಲಿತ ಶೋಷಿತ ಸಮಾಜದ ಮಠಾಧೀಶರುಗಳನ್ನೊಳಗೊಂಡ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟವನ್ನು ಸ್ಥಾಪಿಸಿ, ಒಕ್ಕೂಟದ ಅಧ್ಯಕ್ಷರಾಗಿ ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಮುನ್ನಡೆಸುತ್ತಿದ್ದಾರೆ. ಒಕ್ಕೂಟದ ಮಠಗಳಿಗೆ ಮಾರ್ಗದರ್ಶಕರಾಗಿದ್ದು, ಹಿರಿಯಣ್ಣನಂತೆ ಸಮ-ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದ್ದಾರೆ.
ದಲಿತ, ಹಿಂದುಳಿದ ಮಠಗಳ ಪೂಜ್ಯರುಗಳ ಜೊತೆ ನಿರಂತರವಾಗಿ ಚರ್ಚೆ, ಸಮಾಲೋಚನೆಗಳನ್ನು ನಡೆಸುತ್ತಾ “ಆಧುನಿಕ ಅನುಭವ ಮಂಟಪ”ವನ್ನು ಅನಾವರಣಗೊಳಿಸಿದ್ದಾರೆ.
ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ಎಲ್ಲಾ ಧರ್ಮದವರಿಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುತ್ತಿರುತ್ತಾರೆ. ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ನೆಲೆಸಿರುವ ಜನಸಂಖ್ಯೆ 75%ರಷ್ಟಿರುವ ಮುಸ್ಲಿಂ ಬಾಂಧವರು ಇದ್ದು ಅವರು ಸಹ ಶ್ರೀಮಠದ ಭಕ್ತರಾಗಿರುವುದು ಜಗದ್ಗುರುಗಳ ಭಾವೈಕ್ಯತೆಯ ಬಂಧುವಾಗಿರುವುದಕ್ಕೆ ಸಾಕ್ಷಿಯಾಗಿದೆ.
ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುವುದಕ್ಕೆ ಬೇಕಾಗಿದ್ದ ಸ್ಥಳಕ್ಕೆ ಸುಮಾರು 20 ಲಕ್ಷಗಳ ಸರ್ಕಾರದ ಅನುದಾನ ಕೊಡಿಸುವಲ್ಲಿ ಜಗದ್ಗುರುಗಳ ಪಾತ್ರ ಅನನ್ಯವಾದುದು. ಎಲ್ಲಾ ಧರ್ಮಗಳ, ಹಬ್ಬ ಆಚರಣೆಗಳಿಗೆ ಜಗದ್ಗುರುಗಳು ತುಂಬು ಹೃದಯದಿಂದ ಶುಭಾಶಯಗಳನ್ನು ಸಲ್ಲಿಸುವಲ್ಲಿ ಮೊದಲಿಗರಾಗಿರುತ್ತಾರೆ.
ಶ್ರೀ ಭಕ್ತ ಕನಕದಾಸರ ಜನ್ಮಭೂಮಿ ಮತ್ತು ಕರ್ಮ ಭೂಮಿಗಳ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಹಾವೇರಿ ಜಿಲ್ಲೆ, ಬ್ಯಾಡಗಿ ತಾಲ್ಲೂಕು ಕಾಗಿನೆಲೆ ಗ್ರಾಮದಲ್ಲಿ “ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ”ವನ್ನು ರಚನೆ ಮಾಡಿದ್ದು, ಈ ಪ್ರಾಧಿಕಾರಕ್ಕೆ ಸರ್ಕಾರದಿಂದ ಹಣವನ್ನು ಬಿಡುಗಡೆ ಮಾಡಿಸಿ, ಶ್ರೀಕನಕದಾಸರ ದೇವಾಲಯಗಳು, ಗ್ರಂಥಾಲಯಗಳು, ಸಭಾಭವನ, ಮುಖ್ಯದ್ವಾರಗಳು ಕನಕದಾಸರ ಪುತ್ಥಳಿಗಳಿರುವ ವೃತ್ತಗಳು, ರಸ್ತೆಗಳು, ಉದ್ಯಾನವನ, ಸಂಗೀತ ಕಾರಂಜಿ ಕನಕದಾಸರ ಹುಟ್ಟೂರು ಬಾಡದಲ್ಲಿನ ಕನಕದಾಸರ ಅರಮನೆ, ಕನಕದಾಸರ ಗದ್ದುಗೆ ಮುಂತಾದ ಐತಿಹ್ಯಗಳನ್ನು ಸಂರಕ್ಷಿಸಲು ಪ್ರಾಧಿಕಾರದ ಸವಲತ್ತುಗಳು ಸದ್ವಿನಿಯೋಗವಾಗುವಂತೆ ನೋಡಿಕೊಳ್ಳಲು ಸರ್ಕಾರೇತರ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.
ಪ್ರಸ್ತುತ ಶ್ರೀಗಳ ಶಿಫಾರಸ್ಸಿನ ಅನ್ವಯ ಆಡಳಿತ ಸರ್ಕಾರಗಳಿಂದ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡಿಸಿ, ಕಾಗಿನೆಲೆ ಮತ್ತು ಬಾಡವನ್ನು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಜಗದ್ಗುರುಗಳ ಕೊಡುಗೆಯು ಅಪಾರವಾದುದು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವೇ ಬೇರೆ, ಶ್ರೀ ಕಾಗಿನೆಲೆ ಕನಕಗುರುಪೀಠವೇ ಬೇರೆ – ಸರ್ಕಾರವು ಪ್ರಾಧಿಕಾರಕ್ಕೆ ನೀಡುತ್ತಿರುವ ಹಣವು ಶ್ರೀಮಠದ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ ಎಂದು ಭಕ್ತ ಸಮೂಹಕ್ಕೆ ಮನದಟ್ಟು ಮಾಡಿಕೊಟ್ಟು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾರ್ಗದರ್ಶಕರಾಗಿ, ಶ್ರೀಕನಕಗುರುಪೀಠದ ಭಕ್ತರ ಕಾಣಿಕೆಯೊಂದಿಗೆ ಕುರುಬ ಸಮಾಜ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.
ಕುರುಬ ಸಮಾಜದ ಎಲ್ಲಾ ಪಕ್ಷಗಳ ರಾಜಕೀಯ ನಾಯಕರುಗಳಿಗೆ ವೈಯಕ್ತಿಕವಾಗಿ ಸ್ವಪಕ್ಷ ಮತ್ತು ಅನ್ಯ ಪಕ್ಷಗಳಿಂದ ತೇಜೋವಧೆಯಾದಾಗ, ಸಮಾಜದ ನಾಯಕರುಗಳಿಗೆ ಬೆನ್ನೆಲುಬಾಗಿ ನಿಂತು ನಾಯಕರುಗಳ ಪರವಾಗಿ ಎಚ್ಚರಿಕೆ ನೀಡಿ, ಸಮಾಜದ ನಾಯಕರುಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸಿ ಸಮಾಜದ ಗಟ್ಟಿಧ್ವನಿಯಾಗಿರುತ್ತಾರೆ.
ಸಮಾಜದಲ್ಲಿನ ಅಸಂಘಟಿತ ರಾಜಕೀಯ ನಾಯಕರುಗಳಿಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಬುದ್ಧಿ ಮಾತುಗಳನ್ನು ಹೇಳುತ್ತಿದ್ದರೂ ಸಹ ಕೆಲವೊಮ್ಮೆ ಅತಿರೇಕಕ್ಕೆ ಹೋದಾಗ, ಸಾಮ, ವೇದ, ದಂಡ ಪ್ರಯೋಗಗಳ ಮೂಲಕ ಕಟು ಮಾತುಗಳಿಂದ ಒಗ್ಗಟ್ಟನ್ನು ಮೂಡಿಸುವಲ್ಲಿ ಜಗದ್ಗುರುಗಳ ಪಾತ್ರವು ಮಹತ್ತರವಾಗಿದೆ.
ಹಾಲುಮತ ಇತಿಹಾಸ ಪುರುಷರ ಮತ್ತು ಅವರ ಬರೆದ ಸಾಹಿತ್ಯಗಳನ್ನು ಅಧ್ಯಯನ ಮಾಡಿರುವ ಮೇಧಾವಿ ಜಗದ್ಗುರುಗಳು. ಕೆಲವರು ಕನಕದಾಸರ ಮತ್ತು ಹಾಲುಮತ ಇತಿಹಾಸ ಪುರುಷರ ಕೃತಿ ಚೌರ್ಯ ಮಾಡಿ ಇತಿಹಾಸ ತಿರುಚುವ ಕೆಲಸಕ್ಕೆ ಕೈ ಹಾಕಿದಾಗ, ಉಗ್ರವಾಗಿ ಖಂಡಿಸಿ ಅಂತಹ ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿರುತ್ತಾರೆ. ಸಾಂದರ್ಭಿಕವಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮದ ವೇದಿಕೆಯಲ್ಲಿ ತಾವೇ ಬಿಡುಗಡೆಗೊಳಿಸಿದ ಜಗದ್ಗುರುಗಳು, 20 ನಿಮಿಷದಲ್ಲಿ ಪುಸ್ತಕವನ್ನು ಓದಿ, ಶ್ರೀಕನಕದಾಸರ ಸಾಹಿತ್ಯವನ್ನು ಕೃತಿ ಚೌರ್ಯ ಮಾಡಿರುವುದನ್ನು ಗುರುತಿಸಿ ಆ ಸ್ಥಳದಲ್ಲಿಯೇ ಖಂಡಿಸಿ, ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆಗ್ರಹಿಸಿದರು.
ಶ್ರೀಕಾಗಿನೆಲೆ ಮಹಾಸಂಸ್ಥಾನಕ್ಕೆ ಫೆಬ್ರವರಿ 2011ರಲ್ಲಿ ಜಗದ್ಗುರುಗಳ ಸಮ್ಮುಖದಲ್ಲಿ ಶ್ರೀಮಠದ ಲಾಂಛನವನ್ನು ಪರಿಷ್ಕರಣೆ ಮಾಡಲಾಯಿತು.
ಶ್ರೀ ಮೈಲಾರಲಿಂಗೇಶ್ವರ ಕಾರ್ಣೀಕದ ಮೂಲಕ ನಾಡಿಗೆ ಭವಿಷ್ಯವಾಣಿಯನ್ನು ಹೇಳುವ ಗೊರವಪ್ಪರು ಕುರುಬ ಸಮಾಜಕ್ಕೆ ಸೇರಿದವರಾಗಿದ್ದು, ಅವರಿಗೆ ಶ್ರೀಕ್ಷೇತ್ರ ಮೈಲಾರದಲ್ಲಿ ಪೂಜ್ಯನೀಯ ಸ್ಥಾನಮಾನ ಸಿಗದೆ ವಂಚಿತರಾಗಿದ್ದು, ಬೇರೆಯವರು ವ್ಯಕ್ತಿ ಉತ್ಸವವನ್ನು ಮಾಡಿಕೊಳ್ಳುತ್ತಿದ್ದು, ಇದನ್ನು ಅರಿತ ಜಗದ್ಗುರುಗಳು “ವ್ಯಕ್ತಿ ಉತ್ಸವ ಸಲ್ಲದು, ಸಾಮಾಜಿಕ ನ್ಯಾಯದಲ್ಲಿ ಗೊರವಪ್ಪರಿಗೆ ಪೂಜ್ಯನೀಯ ಸ್ಥಾನಮಾನ ಸಿಗಬೇಕು” ಎಂದು ಖಂಡಿಸಿದ್ದಾರೆ.
“ಬೇಡುವ ನಾಲಿಗೆಯಲ್ಲಿ ನಿಯತ್ತಿದ್ದರೆ ಕೊಡುವ ಕೈಗಳಿಗೆ ಕೊರತೆ ಇಲ್ಲ” ಎನ್ನುವ ಶ್ರೀಭಕ್ತ ಕನಕದಾಸರ ವಾಣಿಯಂತೆ ಜಗದ್ಗುರುಗಳು ಸಮಾಜದ ಯಾವುದೇ ಕೈಂಕಾರ್ಯಗಳನ್ನು ಕೈಗೊಂಡರು ಭಕ್ತರು, ಪ್ರೀತಿ, ನಂಬಿಕೆ, ವಿಶ್ವಾಸ ಸಹೃದಯತೆಯಿಂದ ಜಗದ್ಗುರುಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಬೆಂಬಲವಾಗಿ ನಿಲ್ಲುತ್ತಿರುವುದು, ಜಗದ್ಗುರುಗಳು ಶೂನ್ಯದಿಂದ ಸೃಷ್ಟಿ ಮಾಡುವ ಶಕ್ತಿಯನ್ನು ಹೊಂದಿರುವುದನ್ನು ಭಕ್ತ ಸಮೂಹವು ಅರಿತು, ಪ್ರತಿಯೊಬ್ಬ ಭಕ್ತನು ತನ್ನ ಶಕ್ಯಾನುಸಾರ ಜಗದ್ಗುರುಗಳಿಗೆ ಕೈಜೋಡಿಸಿ, ಶ್ರೀಮಠದ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಕಾರಣೀಭೂತನಾಗಿದ್ದು, ಭಕ್ತರಿಂದ ಜಗದ್ಗುರುಗಳಿಗೆ ಪ್ರಸ್ತುತ 51 ತುಲಾಭಾರ ಗೌರವಾರ್ಪಣೆಯಾಗಿರುವುದು ಜಗದ್ಗುರುಗಳ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತುಲಾಭಾರದಿಂದ ಬಂದ ಹಣವನ್ನು ಕಾಗಿನೆಲೆಯ ನಿತ್ಯಾನ್ನ ದಾಸೋಹ ದತ್ತಿ ನಿಧಿಗೆ ಠೇವಣಿ ಇಟ್ಟಿರುತ್ತಾರೆ.
ನೇರ, ನಡೆ – ನುಡಿಯ ಜಗದ್ಗುರುಗಳು ರಾಜ್ಯದ ಯಾವುದೇ ಸರ್ಕಾರ ಆಡಳಿತದಲ್ಲಿದ್ದರೂ ಅಹಿಂದ ವರ್ಗದವರಿಗೆ ಸಿಗಬೇಕಾದ ಸಾಮಾಜಿಕ ನ್ಯಾಯದ ಸ್ಥಾನಮಾನವನ್ನು ನೀಡುವಂತೆ ಅಹಿಂದ ಒಕ್ಕೂಟದ ಪರವಾಗಿ ಗಟ್ಟಿಧ್ವನಿಯಾಗುತ್ತಿರುವ ಜಗದ್ಗುರುಗಳು. ಸಮುದಾಯದ ಅಭಿವೃದ್ಧಿಗೆ ಕಂಕಣಬದ್ಧವಾಗಿ ಸಮಾಜದ ಬಂಧುಗಳಿಗೆ ಉಂಟಾಗುವ ಕಿರುಕುಳದ ವಿರುದ್ಧ ಅಹಿಂದ ವರ್ಗಕ್ಕೆ ಸಲ್ಲಬೇಕಾದ ಸವಲತ್ತುಗಳ ನಿರ್ಲಕ್ಷ್ಯತನದ ಸರ್ಕಾರ ಕಾರ್ಯವೈಖರಿಗೆ ಮಾತಿನ ಚಾಟೀಯೇಟಿನಿಂದ ಎಚ್ಚರಿಸುತ್ತಿರುತ್ತಾರೆ.
ಸಮಾಜದ ಯುವಕರು, ಸಮಾಜದ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಸಂಘಟನೆಯಾಗುವಂತೆ ಪ್ರೇರೆಪಿಸಿ, ಯುವ ಜನಾಂಗಕ್ಕೆ ತಮ್ಮ ಕಾಯಕಲ್ಪದಿಂದ ಮಾದರಿಯಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಜಗದ್ಗುರುಗಳು ಎಲ್ಲೇ ಹೋಗಲಿ, ಸಮಾಜದ ಯುವಕರು ಆಕರ್ಷಿತರಾಗುತ್ತಿದ್ದಾರೆ. ಯುವ ಜನಾಂಗಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ. ಸ್ವಾಮಿಜಿಯವರ ಸತ್ಕಾರ್ಯಗಳಿಗೆ ಎಲ್ಲಾ ಯುವ ಸಮುದಾಯ ಬೆನ್ನೆಲುಬಾಗಿದ್ದು, ತನು, ಮನ, ಧನ ಸಹಕಾರ ಮಾಡುತ್ತಿರುವುದು ಶ್ರೀಗಳ ಮೇರು ವ್ಯಕ್ತಿತ್ವದ ಪ್ರತೀಕವಾಗಿದೆ.
ಶ್ರೀಕಾಗಿನೆಲೆ ಮಹಾಸಂಸ್ಥಾನ ಶ್ರೀಕನಕಗುರುಪೀಠವು ಅಭಿವೃದ್ಧಿಹೊಂದಿದಂತೆ ಜಿಲ್ಲೆಗೊಂದು ಶಾಖಾಮಠವನ್ನು ತೆರೆಯುವ ಸದುದ್ದೇಶದಿಂದ ಹಾಗೂ ಸಮಾಜದ ಆಸ್ತಿಗಳನ್ನು ಸಂರಕ್ಷಿಸುವ ಹಿತ ದೃಷ್ಟಿಯಿಂದ ಶಿವಮೊಗ್ಗ ನಗರದ ಸುಮಾರು ಕೋಟಿ ಬೆಲೆ ಬಾಳುವ ಕುರುಬರ ಜಡೆಶಂಕರ ಮಠವು ಮೂಲತಃ ಕುರುಬ ಸಮಾಜಕ್ಕೆ ಸೇರಿದ್ದು ಪಟ್ಟಭದ್ರ ಹಿತಾಸಕ್ತಿಗಳಿಂದ ಸಮಾಜದಿಂದ ಕೈತಪ್ಪುವ ಹಂತದಲ್ಲಿದ್ದಾಗ ಆ ಮಠದ ಭಕ್ತರು ಜಗದ್ಗುರುಗಳ ಗಮನಕ್ಕೆ ಈ ವಿಚಾರವನ್ನು ಚರ್ಚಿಸಿ ಶ್ರೀಮಠದ ಆಸ್ತಿಯನ್ನಾಗಿ ತಾವು ರಕ್ಷಿಸಿಕೊಳ್ಳಬೇಕು ಎಂದು ಭಿನ್ನವಿಸಿಕೊಂಡರು.
ಜಗದ್ಗುರುಗಳು ಶ್ರೀಮಠದಲ್ಲಿ ಸನ್ಯಾಸ ದೀಕ್ಷೆ ಪಡೆದು, ಸೇವಾ ಕಾರ್ಯಗಳನ್ನು ಪೂಜಾ ಕೈಂಕರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದ ಸ್ವಾಮಿ ಶ್ರೀ ಅಮೋಘ ಸಿದ್ದೇಶ್ವರರನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ಶಿವಮೊಗ್ಗದ ಕುರುಬರ ಜಡೆ ಶಂಕರ ಮಠಕ್ಕೆ ಪೀಠಾಧ್ಯಕ್ಷರನ್ನಾಗಿ ಮಾಡಿದ್ದಾರೆ.