ಬ್ರಹ್ಮಲೀನ ಜಗದ್ಗುರು ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳು – ಶ್ರೀಕನಕಗುರುಪೀಠ
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ  |  ಸರ್ವೇ ಜನಾಃ ಸುಖಿನೋ ಭವಂತು
Sri Kanaka Guru Peeta Logo
ಶ್ರೀಕನಕಗುರುಪೀಠ Śrī Kānakagurupīṭha
ಪ್ರಥಮ ಜಗದ್ಗುರುಗಳು

ಬ್ರಹ್ಮಲೀನ ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳು

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಪ್ರಥಮ ಪೀಠಾಧ್ಯಕ್ಷರು

ಬ್ರಹ್ಮಲೀನ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳು

ಬ್ರಹ್ಮಲೀನ ಜಗದ್ಗುರು ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳು

ಪ್ರಥಮ ಜಗದ್ಗುರುಗಳು 1933–2006 ಸಮಾಜ ಸೇವಕ

ಜನನ: 09-04-1933  |  ಪೀಠಾರೋಹಣ: 8-9 ಫೆಬ್ರವರಿ 1992  |  ಬ್ರಹ್ಮಲೀನ: 06-07-2006

ಉದಯವಾಯಿತು ಶ್ರೀಕನಕಗುರುಪೀಠ
ಧರ್ಮವು ಅಧಃಪತನಕ್ಕೊಳಗಾಗುವಾಗ ಅದರ ಪುನರುತ್ಥಾನಕ್ಕಾಗಿ ಶಾಂತಿ, ಸಾಮರಸ್ಯಗಳಿಗೆ ಜೀವಾಳವಾಗಿ, ಅವ್ಯಕ್ತ ಶಕ್ತಿಯೊಂದು ಮೈದಾಳಿ ಮಾನವೀಯತೆಯು ಸಾಕ್ಷಾತ್ಕಾರಗೊಂಡಾಗ ಮಹಾಮಾನವತಾವಾದಿಗಳು ಉದಯಿಸಿ ಬರುತ್ತಾರೆ ಅಂತಹವರ ಸಾಲಿನಲ್ಲಿ “ದಾಸಶ್ರೇಷ್ಠ ಶ್ರೀಭಕ್ತ ಕನಕದಾಸರು” ಒಬ್ಬರು.

ಧರ್ಮದ ಹೆಸರಲ್ಲಿ ಕಂದಾಚಾರ, ಮೂಢನಂಬಿಕೆಗಳು ಮನುಷ್ಯರ ಬುದ್ಧಿಗೆ ಬಲೆಹಾಕಿ ಮಾನವೀಯತೆಯು ಮೃಗೀಯ ವರ್ತನೆಯಾಗಿ ಮಾರ್ಪಡುವಂತಹ ವಿಷಮ ಪರಿಸ್ಥಿತಿಯಲ್ಲಿ ತಮ್ಮ ಆಚಾರ ವಿಚಾರಗಳ ಮೂಲಕ ಸಮಾಜದ ಕಣ್ತೆರೆಸಿದ ಶ್ರೀ ಭಕ್ತ ಕನಕದಾಸರ ಸಮ-ಸಮಾಜದ ನಿರ್ಮಾಣದ ಪರಿಕಲ್ಪನೆಯನ್ನು ಆದರ್ಶವಾಗಿ ಇಟ್ಟುಕೊಂಡು, ದಲಿತ, ಹಿಂದುಳಿದ, ಶೋಷಿತರ ಮೇರುಧ್ವನಿಯಾಗಿ “ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ”ವು ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ 8 ಮತ್ತು 9, ಫೆಬ್ರವರಿ 1992ರಲ್ಲಿ ಸ್ಥಾಪನೆಗೊಂಡಿತು.

ಪ್ರಥಮ ಜಗದ್ಗುರುಗಳ ಪೂರ್ವಾಶ್ರಮ

ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಮೊದಲ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳು, ಮೈಸೂರು ಜಿಲ್ಲೆ, ನಂಜನಗೂಡಿನ ಶ್ರೀ ವೀರಪ್ಪ, ಶ್ರೀಮತಿ ಸಿದ್ದಮ್ಮರವರ ಉದರದಲ್ಲಿ 09-04-1933 ರಲ್ಲಿ ಜನಿಸಿದ ಪೂಜ್ಯರು ತಂದೆ – ತಾಯಿಯ ಅಂಕಿತದಲ್ಲಿಯೇ ಬೆಳೆದು ಕಾನೂನು ಶಿಕ್ಷಣವನ್ನು ಪೂರೈಸಿದರು.

ಶಿಕ್ಷಣ ಪೂರೈಸಿದ ನಂತರ ಸಕ್ರೀಯವಾಗಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಆ ಸಮಯದಲ್ಲಿ ದೇಶದಲ್ಲಿ ಹೇರಲ್ಪಟ್ಟ “ತುರ್ತು ಪರಿಸ್ಥಿತಿ”ಯನ್ನು ವಿರೋಧಿಸಿ, ಜೈಲುವಾಸವನ್ನೂ ಸಹ ಅನುಭವಿಸಿದ್ದರು. ಜನರಿಂದ “ನಂಜನಗೂಡಿನ ಗಾಂಧಿ”ಯೆಂದು ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಇವರು 1977 ರಲ್ಲಿ ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆಗೆ ಜನರ ಒತ್ತಾಯದ ಮೇರೆಗೆ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ, ಸೋಲನ್ನು ಅನುಭವಿಸಿದರು.

ಸಮಾಜ ಸೇವೆಯನ್ನು ತನ್ನ ವ್ಯಕ್ತಿತ್ವದಲ್ಲಿಯೇ ಮೈಗೂಡಿಸಿಕೊಂಡಿದ್ದ ಇವರು ಜನ ಸೇವೆಯಿಂದ ವಿಮುಖರಾಗದೇ ಸಾಮಾಜಿಕ ಸೇವೆಯನ್ನು ಮುಂದುವರೆಸಿದರು. ಇವರ ಕುಟುಂಬಕ್ಕೆ ಹಲವಾರು ಸನ್ಯಾಸಿಗಳ ನಿಕಟ ಸಂಪರ್ಕ ಇದ್ದಿದ್ದರಿಂದಲೋ ಅಥವಾ ಭಗವಂತನ ಕೃಪೆಯಿಂದಲೋ ಈ ಸಂದರ್ಭಕ್ಕೆ ಅಖಿಲ ಕರ್ನಾಟಕ ಕುರುಬ ಸಮಾಜದ ಹಿರಿಯರು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠವನ್ನು ಸ್ಥಾಪಿಸಬೇಕೆಂಬ ಮಹದಿಚ್ಚೆಯನ್ನು ಹೊಂದಿ ಇವರನ್ನು ಶ್ರೀ ಕನಕ ಗುರುಪೀಠದ ಪ್ರಥಮ ಜಗದ್ಗುರುಗಳಾಗಲು 1989ರಲ್ಲಿ ಒಪ್ಪಿಸಿದರು.

ಆಧ್ಯಾತ್ಮಿಕ ಪ್ರವಾಸ

ಶ್ರೀಗಳು ಹಿಮಾಲಯದ ಹೃಷಿಕೇಶದಲ್ಲಿ ಮುಕ್ತಾನಂದಜೀಯವರ ಆಶ್ರಮದಲ್ಲಿದ್ದು ನಂತರ ಶಿವಾನಂದಸರಸ್ವತಿ ಮಠದಲ್ಲಿ ಆಧ್ಯಾತ್ಮ ಅಭ್ಯಾಸ ಮಾಡಿದರು. ಶ್ರೀಗಳು ಕೈಲಾಸಾಶ್ರಮ, ಯೋಗಿನಿಕೇತಗಳಲ್ಲಿ ಅಧ್ಯಯನ ಮಾಡಿ, 1991 ರಲ್ಲಿ ಕರುನಾಡಿಗೆ ಹಿಂತಿರುಗಿ, ಬೆಂಗಳೂರಿನ ಶ್ರೀ ತಿರುಚ್ಚಿ ಮಹಾಸ್ವಾಮಿಗಳ ಅನುಗ್ರಹದಿಂದ ಸನ್ಯಾಸ ದೀಕ್ಷೆ ಪಡೆದು 8 ಮತ್ತು 9 ಫೆಬ್ರವರಿ 1992 ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ನಡೆದ ಅಭೂತಪೂರ್ವ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಪ್ರಥಮ ಜಗದ್ಗುರುಗಳಾಗಿ ನಾಡಿನ ಸಾಧು ಸಂತರ, ರಾಜ್ಯ ಮತ್ತು ರಾಷ್ಟ್ರ ನಾಯಕರ, ಲಕ್ಷೋಪಲಕ್ಷ ಭಕ್ತ ಸಮೂಹದ ಸಮಕ್ಷಮದಲ್ಲಿ ಜಯಘೋಷಗಳೊಂದಿಗೆ ಪೀಠಾರೋಹಣ ಮಾಡಿದರು.

ಕಾಯಕಯಾತ್ರೆ

ಪೀಠಾಧ್ಯಕ್ಷರಾದ ಮೇಲೆ ಜಗದ್ಗುರುಗಳು ಜ್ಞಾನ, ಶಿಕ್ಷಣ, ಅನ್ನದಾಸೋಹಗಳ ಕೇಂದ್ರವನ್ನಾಗಿ ಕನಕ ಗುರುಪೀಠ ಬೆಳೆಯಬೇಕೆಂಬ ದೂರದೃಷ್ಟಿಯಿಂದ ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ, ಕುರುಬ ಸಮಾಜವನ್ನು ಸಂಘಟಿಸಿ ಬಂದ ದೇಣಿಗೆಯಲ್ಲಿ ಟಿ.ಸಿ.ಹೆಚ್, ಬಿ.ಇಡಿ., ಪ್ರೌಢಶಾಲೆ, ಕಾನ್ವೆಂಟ್ಗಳನ್ನು ಪ್ರಾರಂಭಿಸಿದರು. ಜಗದ್ಗುರುಗಳ ದೇಹಕ್ಕೆ ಕಾಗಿನೆಲೆ ಹವಾಗುಣ ಮತ್ತು ನೀರು ಹೊಂದದೇ ಇದ್ದಿದ್ದರಿಂದ ಬೆಂಗಳೂರಿನ ಬನಶಂಕರಿಯ ಶಾಖಾಮಠದಲ್ಲಿ ವಾಸ್ತವ್ಯ ಹೂಡಿದರು.

ಶ್ರೀಕನಕಗುರುಪೀಠದ ದಶಮಾನೋತ್ಸವ

1992 ಫೆಬ್ರವರಿ 8 ಮತ್ತು 9 ರಂದು ಸ್ಥಾಪಿತವಾದ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠವು 2002 ಏಪ್ರಿಲ್ 20, 21 ರಂದು ಶ್ರೀಮಠದ ದಶಮಾನೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿತು. ಈ ಕಾರ್ಯಕ್ರಮದಲ್ಲಿ ರಾಜಕೀಯ ಮುತ್ಸದ್ಧಿಗಳು, ಸಾಧು ಸತ್ಪುರುಷರು, ಭಕ್ತಾಧಿಗಳು ಭಾಗವಹಿಸಿದ್ದರು. ಕೇವಲ 10 ವರ್ಷಗಳ ಅವಧಿಯಲ್ಲಿ ಶ್ರೀಮಠವು ಸಾಧಿಸಿರುವ ಸಾಧನೆ ನೋಡುಗರ ದೃಷ್ಟಿಯಿಂದ ಕಡಿಮೆ ಎಂದೇ ಭಾವಿಸಿದರೂ ಸಹ ಎದುರಾದ ಎಲ್ಲಾ ಸಂಕಷ್ಟಗಳನ್ನು ನಿಭಾಯಿಸಿಕೊಂಡು, ಜಗದ್ಗುರುಗಳು ಸಾಧಿಸಿರುವ ಪ್ರಗತಿಯನ್ನು ಒಳಹೊಕ್ಕು ನೋಡಿದರೆ ಕಣ್ಣೆದುರು ಬೃಹದಾಕಾರವಾಗಿ ನಿಲ್ಲುತ್ತದೆ. ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಸಮಾಜವನ್ನು ಒಗ್ಗೂಡಿಸಿಕೊಂಡು ರಾಜಕೀಯ ಇಚ್ಛಾಶಕ್ತಿಯನ್ನು ಬಳಸಿಕೊಂಡು, ಶ್ರೀಮಠವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಂಕಲ್ಪ ಮಾಡಲಾಯಿತು.

ಶಿಷ್ಯ ಸ್ವೀಕಾರ

ಕರ್ನಾಟಕ ಕುರುಬರ ಸಂಘಟನೆಯ ದೃಷ್ಟಿಯಿಂದ ಶ್ರೀಮಠದ ಕಿರಿಯ ಸ್ವಾಮಿಜಿಗಳಾಗಿದ್ದ

  • ಶ್ರೀ ನಿರಂಜನಾನಂದಪುರಿ ಸ್ವಾಮಿಜಿಯವರನ್ನು — ಬೆಳಗಾವಿ ವಿಭಾಗಕ್ಕೆ
  • ಶ್ರೀ ಈಶ್ವರಾನಂದಪುರಿ ಸ್ವಾಮಿಜಿಯವರನ್ನು — ಬೆಂಗಳೂರು ವಿಭಾಗಕ್ಕೆ
  • ಶ್ರೀ ಸಿದ್ದರಾಮಾನಂದಪುರಿ ಸ್ವಾಮಿಜಿಯವರನ್ನು — ಕಲಬುರಗಿ ವಿಭಾಗಕ್ಕೆ
  • ಶ್ರೀ ಶಿವಾನಂದಪುರಿ ಸ್ವಾಮಿಜಿಗಳನ್ನು — ಮೈಸೂರು ವಿಭಾಗಕ್ಕೆ

ಶಾಖಾಮಠಾಧಿಪತಿಗಳಾಗಿ ನಿಯೋಜಿಸಿ, ಕುರುಬ ಸಮಾಜದ ಅಭಿವೃದ್ಧಿಯ ಜವಾಬ್ದಾರಿಯನ್ನು ವಹಿಸಲಾಯಿತು.

ವಿದಾಯದ ನುಡಿಗಳು

“ತಾವು ಕನಕ ಗುರುಪೀಠದ ಪ್ರಥಮ ಜಗದ್ಗುರುಗಳಾಗಿ ಸಾಧಿಸಿದ್ದು ನೀರಿಲ್ಲದ ಕೆರೆಯಲ್ಲಿ ಈಜಿದಂತಾಗಿದೆ. ಸಾಧಿಸಿದ್ದು ಕಡಿಮೆ, ಸಾಧಿಸಬೇಕಾದುದು ಬಹಳ ಇದೆ”
— ಜಗದ್ಗುರುಗಳ ಅಂತರಾಳದ ನೋವಿನ ಮಾತುಗಳು

ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಮೊದಲ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳು ಅನಾರೋಗ್ಯದ ನಿಮಿತ್ತ ದಿನಾಂಕ 06-07-2006 ರಂದು ಬೆಂಗಳೂರಿನ ಶಾಖಾಮಠದಲ್ಲಿ ಬ್ರಹ್ಮಲೀನರಾದರು. ಜಗದ್ಗುರುಗಳ ಪಾರ್ಥಿವ ಶರೀರವನ್ನು ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಆವರಣದಲ್ಲಿ ಶಾಖಾ ಮಠಾಧೀಶರುಗಳ ನೇತೃತ್ವದಲ್ಲಿ ನಾಡಿನ ಸಾಧು ಸಂತರು, ಗಣ್ಯ ವ್ಯಕ್ತಿಗಳು ಅಪಾರ ಭಕ್ತ ಸಮೂಹ ಅಂತ್ಯ ಸಂಸ್ಕಾರವನ್ನು ಕೈಗೊಂಡು ಅಶ್ರುತರ್ಪಣ ಅರ್ಪಿಸಿದರು.

Scroll to Top